ನವದೆಹಲಿ: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಬುಧವಾರ ಎರಡು ವರ್ಷ ಪೂರೈಸಿದೆ. 2019 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಆರಂಭಿಸಿದ್ದ ಪಿಎಂ ಕಿಸಾನ್ ನಿಧಿ ಯೋಜನೆಯಡಿ ದೇಶಾದ್ಯಂತ ಜಮೀನು ಮಾಲೀಕತ್ವ ಹೊಂದಿರುವ ರೈತರಿಗೆ ಆದಾಯದ ನೆರವು ನೀಡುವ ಯೋಜನೆ ಇದಾಗಿದೆ.
ವಾರ್ಷಿಕ 6 ಸಾವಿರ ರೂಪಾಯಿಗಳನ್ನು ಮೂರು ಕಂತುಗಳಲ್ಲಿ ನೀಡಲಾಗುತ್ತದೆ. ತಮ್ಮ ಹೆಸರಿನಲ್ಲಿರುವ ಕೃಷಿ ಜಮೀನು ಹೊಂದಿರುವ ಎಲ್ಲಾ ರೈತ ಕುಟುಂಬಗಳು ಯೋಜನೆಯ ಲಾಭ ಪಡೆಯಲು ಅರ್ಹರಾಗಿರುತ್ತಾರೆ.
ಸಾಂಸ್ಥಿಕ ಭೂಮಾಲೀಕರು, ಸಾಂವಿಧಾನಿಕ ಹುದ್ದೆಗಳನ್ನು ಹೊಂದಿದ ಕುಟುಂಬದವರು, ಸೇವೆಯಲ್ಲಿರುವ ಅಥವಾ ನಿವೃತ್ತ ಅಧಿಕಾರಿಗಳು, ಕೇಂದ್ರ ಅಥವಾ ರಾಜ್ಯ ಸರ್ಕಾರದ ನೌಕರರು, ಸಾರ್ವಜನಿಕ ವಲಯದ ನೌಕರರು, ವೈದ್ಯರು, ಇಂಜಿನಿಯರುಗಳು, ವಕೀಲರು, ನಿವೃತ್ತ ಪಿಂಚಣಿದಾರರು, ಮಾಸಿಕ 10 ಸಾವಿರ ರೂಪಾಯಿಗಿಂತ ಹೆಚ್ಚಿನ ಪಿಂಚಣಿ ಹೊಂದಿದವರು ಮತ್ತು ಆದಾಯ ತೆರಿಗೆ ಪಾವತಿಸಿದವರು ಅರ್ಹರಲ್ಲ ಎಂದು ಹೇಳಲಾಗಿದೆ.
ರೈತ ಕುಟುಂಬಗಳಿಗೆ ಪ್ರತಿ ನಾಲ್ಕು ತಿಂಗಳಿಗೊಮ್ಮೆ ತಲಾ ಎರಡು ಸಾವಿರ ರೂಪಾಯಿಗಳನ್ನು ಮೂರು ಕಂತುಗಳಲ್ಲಿ ನೀಡಲಾಗುತ್ತದೆ. ವಾರ್ಷಿಕ 6000 ರೂ.ನೀಡುವ ಯೋಜನೆಯ ಮತ್ತೊಂದು ಕಂತಿನ ಹಣವನ್ನು ಶೀಘ್ರವೇ ನೀಡಲಾಗುವುದು. ಆರಂಭದಲ್ಲಿ ಸಣ್ಣ ಮತ್ತು ಅತಿಸಣ್ಣ ರೈತರ ಕುಟುಂಬಗಳಿಗೆ ಮಾತ್ರ ಯೋಜನೆ ನೀಡಲು ತಿಳಿಸಲಾಗಿತ್ತು. 2019 ರ ಜೂನ್ ನಲ್ಲಿ ಯೋಜನೆಯನ್ನು ಪರಿಷ್ಕರಿಸಿ ಜಮೀನುಗಳ ಗಾತ್ರ ಲೆಕ್ಕಿಸದೆ ಎಲ್ಲಾ ರೈತರಿಗೂ ನೀಡಲು ತಿಳಿಸಲಾಗಿದೆ.
ಯೋಜನೆಗೆ ಎರಡು ವರ್ಷ ತುಂಬಿದ ಹಿನ್ನಲೆಯಲ್ಲಿ ಟ್ವೀಟ್ ಮಾಡಿರುವ ಮೋದಿ, ರೈತ ಪರ ಯೋಜನೆಗಳ ಮಾಹಿತಿ ಹಂಚಿಕೊಂಡಿದ್ದು, ರೈತರ ಕಲ್ಯಾಣಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಹೇಳಿದ್ದಾರೆ.