ನವದೆಹಲಿ: ಮೊದಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಗಾಯದ ಮೇಲೆ ಬರೆ ಎಳೆದಂತೆ ಎಲ್ಪಿಜಿ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ನುಂಗಲಾರದ ತುತ್ತಾಗಿದೆ.
ಅಂದಹಾಗೆ, ಎಲ್ಪಿಜಿ ಗ್ರಾಹಕರಿಗೆ ಕಳೆದ ಮೇ ತಿಂಗಳಿನಿಂದಲೂ ಸಬ್ಸಿಡಿ ನೀಡಿಲ್ಲ. ಸಬ್ಸಿಡಿ ನಿಲ್ಲಿಸಿದ ಬಗ್ಗೆ ಅಧಿಕೃತವಾಗಿ ಹೇಳದಿದ್ದರೂ ಗ್ರಾಹಕರಿಗೆ ಸಿಲಿಂಡರ್ ಸಬ್ಸಿಡಿ ಹಣ ಬಂದೇ ಇಲ್ಲ. ಕೇಂದ್ರ ಸರ್ಕಾರ ಸಬ್ಸಿಡಿ ನೀಡುವುದನ್ನು ನಿಲ್ಲಿಸಿದೆ.
ಇದನ್ನು ಪರೋಕ್ಷವಾಗಿ ಪೆಟ್ರೋಲಿಯಂ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಅವರೇ ಹೇಳಿದ್ದಾರೆ. ಎಲ್ಪಿಜಿ ಸಬ್ಸಿಡಿ ನಿಲ್ಲಿಸಿದ್ದೇವೆ ಎಂಬುದು ತಪ್ಪು. ಅದನ್ನು ನಾನು ಒಪ್ಪಲ್ಲ, ನಿರಾಕರಿಸುತ್ತೇನೆ. ಕೊರೋನಾ ಲಾಕ್ಡೌನ್ ಸಂದರ್ಭದಲ್ಲಿ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿ 8 ಕೋಟಿ ಬಡವರಿಗಾಗಿ 14 ಕೋಟಿ ಎಲ್ಪಿಜಿ ಸಿಲಿಂಡರ್ ಗಳನ್ನು ಉಚಿತವಾಗಿ ನೀಡಲಾಗಿದೆ ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಹೀಗೆ ಬಡವರಿಗೆ ಉಚಿತವಾಗಿ ಸಿಲಿಂಡರ್ ನೀಡುವ ಮೂಲಕ ಸರ್ಕಾರ ಬಡವರ ಪರ ನಿಂತಿದೆ ಎಂದು ಧರ್ಮೇಂದ್ರ ಪ್ರಧಾನ್ ಹೇಳಿದ್ದು, ಈ ಮೂಲಕ ಬಡವರಿಗೆ ಮಾತ್ರ ಸಬ್ಸಿಡಿ ನೀಡುತ್ತಿರುವುದನ್ನು ಪರೋಕ್ಷವಾಗಿ ತಿಳಿಸಿದ್ದಾರೆ.
ಕಳೆದ ಮೇ ತಿಂಗಳಿಂದಲೂ ಎಲ್ಪಿಜಿ ಗ್ರಾಹಕರಿಗೆ ಸಬ್ಸಿಡಿ ನೀಡಿಲ್ಲ. ಸಬ್ಸಿಡಿಯನ್ನು ರದ್ದು ಮಾಡಲಾಗಿದ್ದರೂ, ಈ ಬಗ್ಗೆ ಎಲ್ಲಿಯೂ ಕೇಂದ್ರ ಸರ್ಕಾರ ಅಧಿಕೃತವಾಗಿ ಹೇಳಿಲ್ಲ ಎಂದು ಹೇಳಲಾಗಿದೆ.