ಬೆಳಗಾವಿ: ವೇಶ್ಯಾವಾಟಿಕೆ ಅಡ್ಡೆಯಲ್ಲಿ ಸಿಲುಕಿದ್ದ ಯುವತಿಯನ್ನು ರಕ್ಷಿಸಿದ ಪೊಲೀಸರು ಆಕೆಯನ್ನು ಪೋಷಕರಿಗೆ ಒಪ್ಪಿಸಿದ್ದಾರೆ.
ಬೆಳಗಾವಿಯ ಸದಾಶಿವನಗರದ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದ ಬಗ್ಗೆ ಮಾಹಿತಿ ಪಡೆದ ಬೆಳಗಾವಿ ಪೊಲೀಸರು ಫೆಬ್ರವರಿ 7 ರಂದು ದಾಳಿಯ ಸಂದರ್ಭದಲ್ಲಿ ಇಬ್ಬರು ಯುವತಿಯರನ್ನು ಎಪಿಎಂಸಿ ಠಾಣೆ ಪೊಲೀಸರು ರಕ್ಷಿಸಿದ್ದಾರೆ.
ಮಹಿಳಾ ಸಾಂತ್ವನ ಕೇಂದ್ರಕ್ಕೆ ಯುವತಿಯರನ್ನು ಸ್ಥಳಾಂತರಿಸಲಾಗಿದ್ದು, ವಿಚಾರಣೆ ಸಂದರ್ಭದಲ್ಲಿ ಉತ್ತರ ಪ್ರದೇಶ ಮೂಲದ ಯುವತಿಯ ವಿಳಾಸ ಗೊತ್ತಾಗಿದೆ. 2017 ರಲ್ಲಿ ಯುವತಿ ಅಪಹರಣವಾಗಿದ್ದು ಈ ಸಂಬಂಧ ಕೇಸ್ ದಾಖಲಾಗಿರುವುದು ಗೊತ್ತಾಗಿದೆ.
ಉತ್ತರ ಪ್ರದೇಶದ ಗಾಜಿಯಾಬಾದ್ ಠಾಣೆಯಲ್ಲಿ ಕೇಸ್ ದಾಖಲಾಗಿರುವ ಬಗ್ಗೆ ಬೆಳಗಾವಿ ಪೊಲೀಸರಿಗೆ ಗೊತ್ತಾಗಿ ಉತ್ತರಪ್ರದೇಶ ಪೊಲೀಸರನ್ನು ಸಂಪರ್ಕಿಸಿದ್ದಾರೆ. ಉತ್ತರಪ್ರದೇಶದ ಪೊಲೀಸರೊಂದಿಗೆ ಬೆಳಗಾವಿಗೆ ಬಂದ ಯುವತಿಯ ಪೋಷಕರು ಆಕೆಯನ್ನು ಕರೆದುಕೊಂಡು ಹೋಗಿದ್ದಾರೆ. ಪೊಲೀಸರು ಮತ್ತು ಮಹಿಳಾ ಸಾಂತ್ವನ ಕೇಂದ್ರದ ಸಿಬ್ಬಂದಿ ಕಾಳಜಿವಹಿಸಿ ಯುವತಿಯನ್ನು ಪೋಷಕರ ಮಡಿಲು ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆನ್ನಲಾಗಿದೆ.