ಬೆಂಗಳೂರು: ಚಿಕ್ಕಬಳ್ಳಾಪುರ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕರ ಹೇಳಿಕೆ ವಿರುದ್ಧ ಕಿಡಿಕಾರಿರುವ ಸಚಿವ ಡಾ.ಸುಧಾಕರ್, ಜವಾಬ್ದಾರಿಯುತ ಸ್ಥಾನದಲ್ಲಿರುವ ನಾಯಕರು ವಾಸ್ತವಾಂಶ ಅರಿಯದೆ ಈ ರೀತಿ ಸಾವಿನಲ್ಲೂ ರಾಜಕೀಯ ಮಾಡುವುದು ಶೋಭೆ ತರುವುದಿಲ್ಲ ಎಂದಿದ್ದಾರೆ.
ಸರಣಿ ಟ್ವೀಟ್ ಮೂಲಕ ಕಿಡಿಕಾರಿದ ಸಚಿವರು, ನಿಯಮ ಬಾಹಿರವಾಗಿ ಜಿಲೆಟಿನ್ ಸಂಗ್ರಹಣೆ ಮಾಡುತ್ತಿದ್ದವರ ವಿರುದ್ಧ ಅಧಿಕಾರಿಗಳು ರೈಡ್ ಮಾಡಿದ್ದ ಸಂದರ್ಭದಲ್ಲಿ ಅದನ್ನು ಬೇರೆಡೆ ಸಾಗಿಸುವಾಗ ಈ ದುರಂತ ಸಂಭವಿಸಿದೆ. ಅಕ್ರಮ ಗಣಿಗಾರಿಕೆ ಅಥವಾ ಇನ್ಯಾವುದೇ ರೀತಿಯ ಅನೈತಿಕ, ಕಾನೂನು ಬಾಹಿರ ಚಟುವಟಿಕೆಗಳಿಗೆ ನಾನು ಎಂದಿಗೂ ಬೆಂಬಲ ನೀಡಿಲ್ಲ ಮತ್ತು ಮುಂದೆಯೂ ನೀಡುವುದಿಲ್ಲ. ಜಿಲ್ಲಾ ಉಸ್ತುವಾರಿ ಸಚಿವನಾಗಿ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ದೊರಕಿಸುವುದು ನನ್ನ ಕರ್ತವ್ಯವಾಗಿದ್ದು ಆದಷ್ಟು ಬೇಗ ಈ ಕೆಲಸ ಮಾಡಲಿದ್ದೇನೆ ಎಂದಿದ್ದಾರೆ.
ಸಾವಿನ ಮನೆಯಲ್ಲೂ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮತ್ತು ಇನ್ನೊಬ್ಬರ ತೇಜೋವಧೆ ಮಾಡಲು ಯತ್ನಿಸುತ್ತಿರುವ ಕಾಂಗ್ರೆಸ್ ಪಕ್ಷದ ನಾಯಕರಿಗೆ ನಾಚಿಕೆಯಾಗಬೇಕು. ಈ ಘಟನೆಯ ಹಿಂದೆ ಯಾರೇ ಇರಲಿ ಅವರ ವಿರುದ್ಧ ನಿಷ್ಪಕ್ಷಪಾತ ತನಿಖೆ ನಡೆಸಿ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುವುದು ನಿಶ್ಚಿತ ಎಂದು ಹೇಳಿದ್ದಾರೆ.