ಬೆಂಗಳೂರು: ವಸತಿ ಸಮುಚ್ಚಯ ಸೇರಿ ದೊಡ್ಡ ಕಟ್ಟಡಗಳಲ್ಲಿ ಎಲೆಕ್ಟ್ರಿಕ್ ವಾಹನ ಚಾರ್ಜ್ ವ್ಯವಸ್ಥೆಯನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂದು ಡಿಸಿಎಂ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಇಂದು ಎಲೆಕ್ಟ್ರಿಕ್ ವಾಹನಗಳ ಬಳಕೆ ಕುರಿತಾಗಿ ಏರ್ಪಡಿಸಿದ್ದ ಭವಿಷ್ಯದತ್ತ ಸುಸ್ಥಿರ ಸಾರಿಗೆ ಕುರಿತ ವರ್ಚುಯಲ್ ಗೋಷ್ಠಿಯಲ್ಲಿ ಅವರು ಮಾತನಾಡಿದರು.
ಎಲೆಕ್ಟ್ರಿಕ್ ವಾಹನಗಳನ್ನು ಒದಗಿಸಿದರೆ ಸಾಲದು, ಎಲ್ಲ ಕಡೆಯೂ ಸುಲಭವಾಗಿ ಚಾರ್ಜಿಂಗ್ ಮಾಡಿಕೊಳ್ಳಲು ವ್ಯವಸ್ಥೆ ಇರಬೇಕು. ಮುಂದಿನ ದಿನಗಳಲ್ಲಿ ಬ್ಯಾಟರಿ ಚಾಲಿತ ವಾಹನಗಳು ಹೆಚ್ಚಾಗಿ ರಸ್ತೆಗಿಳಿಯಲಿವೆ. ಗ್ರಾಹಕರು ಬ್ಯಾಟರಿಗಳನ್ನು ಬಾಡಿಗೆಗೆ ಪಡೆಯಬಹುದು. ಪೆಟ್ರೋಲ್ ಬಂಕ್ ರೀತಿಯಲ್ಲಿ ಬ್ಯಾಟರಿ ಬಂಕ್ ಗಳು ತಲೆಯೆತ್ತಲಿವೆ ಎಂದು ಹೇಳಿದ್ದಾರೆ.
ಗ್ರಾಹಕರಿಗೆ ಕಡಿಮೆ ದರದಲ್ಲಿ ವಾಹನ ಸಿಗಲಿದೆ. ಅನುಕೂಲಕ್ಕೆ ತಕ್ಕಂತೆ ಗ್ರಾಹಕರು ಬ್ಯಾಟರಿ ಬಳಕೆ ಮಾಡಿಕೊಳ್ಳಬಹುದಾಗಿದೆ. ಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಎಲೆಕ್ಟ್ರಿಕ್ ವಾಹನ ಬಳಕೆಗೆ ಉತ್ತೇಜನ ನೀಡಲಾಗುತ್ತದೆ ಇದಕ್ಕಾಗಿ ಗ್ರಾಹಕರಿಗೆ ರಿಯಾಯಿತಿ ವಿದ್ಯುತ್, ಸಬ್ಸಿಡಿ ಸೇರಿದಂತೆ ಹಲವು ಸೌಲಭ್ಯ ಕಲ್ಪಿಸಲಾಗಿದೆ. ರಾಜ್ಯದಲ್ಲಿ ದೇಶದಲ್ಲೇ ಮೊದಲ ಬಾರಿಗೆ ಎಲೆಕ್ಟ್ರಿಕ್ ವಾಹನ ನೀತಿ ಅನುಷ್ಠಾನಕ್ಕೆ ತರಲಾಗಿದೆ ಎಂದು ತಿಳಿಸಿದ್ದಾರೆ.