ನವದೆಹಲಿ: ಮಹದಾಯಿ ನದಿ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಲ್ಲಿ ರಾಜ್ಯಕ್ಕೆ ಭಾರೀ ಹಿನ್ನಡೆಯಾಗಿದೆ.
ಕರ್ನಾಟಕದ ವಿರುದ್ಧ ಗೋವಾ ನ್ಯಾಯಾಂಗ ನಿಂದನೆ ದೂರು ಸಲ್ಲಿಸಿದ್ದು, ಮಹದಾಯಿ ನೀರು ಬಳಕೆ ವಿಚಾರಕ್ಕೆ ಸಂಬಂಧಿಸಿದಂತೆ ಗೋವಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಇಂದು ಸುಪ್ರೀಂಕೋರ್ಟ್ನಲ್ಲಿ ನಡೆದಿದೆ. ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಪೀಠದಲ್ಲಿ ವಿಚಾರಣೆ ನಡೆಸಲಾಗಿದ್ದು, ಕರ್ನಾಟಕ ಮಹದಾಯಿ ನೀರು ತಿರುಗಿಸಿದೆಯೇ ಎಂಬುದರ ಬಗ್ಗೆ ಪರಿಶೀಲನೆ ನಡೆಸಲು ತಜ್ಞರ ಸಮಿತಿ ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ಆದೇಶಿಸಲಾಗಿದೆ.
ಮಹದಾಯಿ ನದಿಯಿಂದ ಮಲಪ್ರಭಾಕ್ಕೆ ನೀರು ತಿರುಗಿಸಲಾಗುತ್ತದೆ ಎಂದು ಗೋವಾ ಸರ್ಕಾರ ಸುಪ್ರೀಂಕೋರ್ಟ್ ಮುಂದೆ ದೂರು ಸಲ್ಲಿಸಿದ್ದು, ಈ ಹಿನ್ನೆಲೆಯಲ್ಲಿ ನ್ಯಾಯಪೀಠ ತಜ್ಞರ ಸಮಿತಿ ರಚಿಸಿ 4 ವಾರದಲ್ಲಿ ವರದಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ. ಮಹದಾಯಿ ನದಿ ನೀರು ತಿರುಗಿಸುತ್ತಿಲ್ಲ ಎಂದು ಸುಪ್ರೀಂ ಕೋರ್ಟಿಗೆ ಮನವರಿಕೆ ಮಾಡಿಕೊಡುವಲ್ಲಿ ಕರ್ನಾಟಕ ವಿಫಲವಾಗಿದೆ ಎಂದು ಹೇಳಲಾಗಿದ್ದು, ಏಪ್ರಿಲ್ 4 ಕ್ಕೆ ವಿಚಾರಣೆಯನ್ನು ಮುಂದೂಡಲಾಗಿದೆ.