ಬೆಂಗಳೂರು: ಫಿಟ್ನೆಸ್ ನೋಡಬೇಕೆಂದು ಯುವಕನ ಬೆತ್ತಲೆ ಚಿತ್ರ ಪಡೆದ ಯುವತಿ ಬ್ಲಾಕ್ ಮೇಲ್ ಮಾಡಿ ಹಣ ಪಡೆದ ಪ್ರಕರಣ ಬೆಳಕಿಗೆ ಬಂದಿದೆ.
ಆನ್ಲೈನ್ ಮ್ಯಾಟ್ರಿಮೋನಿಯಲ್ ವೇದಿಕೆಗಳಲ್ಲಿ ಮದುವೆಯಾಗಲು ಹುಡುಗಿ ಹುಡುಕುತ್ತಿದ್ದ ಯುವಕನನ್ನು ಪರಿಚಯಿಸಿಕೊಂಡಿದ್ದ ಯುವತಿ ವಾಟ್ಸಾಪ್ ವಿಡಿಯೋ ಕಾಲ್ ಮೂಲಕ ಯುವಕನಿಗೆ ಬೆತ್ತಲಾಗಲು ಹೇಳಿದ್ದು, ವಿಡಿಯೋ ಮಾಡಿಕೊಂಡು ಬ್ಲಾಕ್ಮೇಲ್ ಮಾಡಿ ಹಣ ಪಡೆದುಕೊಂಡಿದ್ದಾಳೆ.
ಹುಳಿಮಾವು ನಿವಾಸಿಯಾಗಿರುವ 33 ವರ್ಷದ ಯುವಕ ಹುಳಿಮಾವು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮ್ಯಾಟ್ರಿಮೋನಿಯಲ್ ವೆಬ್ಸೈಟ್ನಲ್ಲಿ ಪರಿಚಯವಾಗಿದ್ದ ಯುವತಿ ವಾಟ್ಸಾಪ್ ಚಾಟ್ ಆರಂಭಿಸಿದ್ದಾಳೆ. ನಿನ್ನನ್ನು ಮದುವೆಯಾಗುತ್ತೇನೆ. ಫಿಟ್ನೆಸ್ ನೋಡಬೇಕು ಎಂದು ನಂಬಿಸಿದ್ದಾಳೆ. ಫೆಬ್ರವರಿ 7 ರಂದು ಬೆತ್ತಲಾಗಲು ಪ್ರಚೋದಿಸಿ ಫೋಟೋ, ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾಳೆ.
ನಂತರದಲ್ಲಿ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದು, ಹಣ ಕೊಡದಿದ್ದರೆ ಬೆತ್ತಲೆ ಫೋಟೋ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಹೇಳಿದ್ದಾಳೆ. ಇದರಿಂದ ಕಂಗಾಲಾದ ಯುವಕ 20 ಸಾವಿರ ರೂ. ಕೊಟ್ಟಿದ್ದು, ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಾಗ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಹುಳಿಮಾವು ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.