ಸ್ಮಾರ್ಟ್ ಫೋನ್ ಬಳಕೆದಾರರಿಗೆ ಶಾಕಿಂಗ್ ಸುದ್ದಿಯೊಂದು ಇಲ್ಲಿದೆ. ಬಳಕೆದಾರರು ಕೆಲವೊಂದು ಆಪ್ ಗಳನ್ನು ಡೌನ್ಲೋಡ್ ಮಾಡಿಕೊಂಡ ವೇಳೆ ಷರತ್ತುಗಳನ್ನು ಪೂರ್ಣವಾಗಿ ತಿಳಿದುಕೊಳ್ಳದೆ ಸಮ್ಮತಿ ಸೂಚಿಸಿದ ಸಂದರ್ಭದಲ್ಲಿ ಅವರುಗಳ ಲೋಕೇಶನ್ ಟ್ರಾಕ್ ಮಾಡುವ ಈ ಆಪ್ ಅಥವಾ ಸೇವೆಗಳು ಮಹತ್ವದ ಮಾಹಿತಿಗಳನ್ನು ಸಂಗ್ರಹಿಸುತ್ತವೆ ಎಂಬ ಸಂಗತಿ ಅಧ್ಯಯನದಲ್ಲಿ ಬಹಿರಂಗವಾಗಿದೆ.
ಬೊಲಾಗ್ನಾ ವಿಶ್ವವಿದ್ಯಾಲಯ ಹಾಗೂ ಯೂನಿವರ್ಸಿಟಿ ಕಾಲೇಜ್ ಲಂಡನ್ ನ ಸಂಶೋಧಕರು ಅಧ್ಯಯನದಲ್ಲಿ ಈ ಮಹತ್ವದ ಮಾಹಿತಿಯನ್ನು ಕಂಡುಕೊಂಡಿದ್ದು, ಇದು ಸ್ಮಾರ್ಟ್ ಫೋನ್ ಬಳಕೆದಾರರ ಖಾಸಗಿತನದ ಸ್ಪಷ್ಟ ಉಲ್ಲಂಘನೆ ಎಂದು ಹೇಳಿದ್ದಾರೆ.
ಈ ಕುರಿತು ಅಧ್ಯಯನ ಕೈಗೊಳ್ಳುವ ಸಲುವಾಗಿದೆ TrackingAdvisor ಎಂಬ ಮೊಬೈಲ್ ಅಪ್ಲಿಕೇಶನ್ ಅನ್ನು ಈ ಸಂಶೋಧಕರು ಅಭಿವೃದ್ದಿಪಡಿಸಿದ್ದು, ಇದನ್ನು ಡೌನ್ ಲೋಡ್ ಮಾಡಿಕೊಂಡ ಸ್ಮಾರ್ಟ್ ಫೋನ್ ಬಳಕೆದಾರರ ಮಹತ್ವದ ಖಾಸಗಿ ಮಾಹಿತಿಗಳು ಈ ಸಂದರ್ಭದಲ್ಲಿ ಲಭ್ಯವಾಗಿದೆ.
ಬಳಕೆದಾರರು ಆಪ್ ಡೌನ್ ಲೋಡ್ ಮಾಡಿಕೊಂಡ ವೇಳೆ ಷರತ್ತುಗಳ ಕುರಿತು ಹೆಚ್ಚಿನ ಅರಿವಿಲ್ಲದೆ ಸಮ್ಮತಿ ಸೂಚಿಸಿರುವುದು ಸಹ ಅಧ್ಯಯನದ ವೇಳೆ ಕಂಡು ಬಂದಿದೆ. ಆ ಆಪ್ ಡೌನ್ ಲೋಡ್ ಮಾಡಿಕೊಂಡ ಬಳಕೆದಾರರು ವಾಸವಿರುವ ಸ್ಥಳ, ಧರ್ಮ, ಅವರ ಹವ್ಯಾಸ, ಅವರ ವ್ಯಕ್ತಿತ್ವ ಮೊದಲಾದ ಮಾಹಿತಿಗಳು ಈ ಸಂದರ್ಭದಲ್ಲಿ ಸೋರಿಕೆಯಾಗಿದೆ.
ಅಧ್ಯಯನದ ವೇಳೆ 69 ಮಂದಿ ಬಳಕೆದಾರರು ಎರಡು ವಾರಗಳ ಕಾಲ TrackingAdvisor ಅಪ್ಲಿಕೇಶನ್ ಬಳಸಿದ್ದು, ಈ ಅವಧಿಯಲ್ಲಿ 2 ಲಕ್ಷಕ್ಕೂ ಅಧಿಕ ಸ್ಥಳಗಳಿಗೆ ಬಳಕೆದಾರರು ಭೇಟಿ ನೀಡಿದ್ದಾರೆ. ಈ ಪೈಕಿ 2500 ಸ್ಥಳಗಳ ಸ್ಪಷ್ಟ ಪರಿಚಯ ಸಿಕ್ಕಿದೆ. ಅಲ್ಲದೆ 5000 ದಷ್ಟು ಖಾಸಗಿ ಮಾಹಿತಿ ಲಭ್ಯವಾಗಿದೆ. ಜೊತೆಗೆ ಕೆಲ ಬಳಕೆದಾರರು ಚಿಕಿತ್ಸೆಗೆ ಆಸ್ಪತ್ರೆಗೆ ಭೇಟಿ ನೀಡಿದ ವೇಳೆ ಅವರಿಗಿರುವ ರೋಗಗಳ ಮಾಹಿತಿಯೂ ಸಿಕ್ಕಿದೆ.
ಇವುಗಳನ್ನೇ ಬಳಸಿಕೊಳ್ಳುವ ಅಪ್ಲಿಕೇಶನ್ ಗಳು ಬಳಕೆದಾರರ ಲೋಕೇಶನ್ ಟ್ರಾಕ್ ಮಾಡಿದ ವೇಳೆ ಅವುಗಳಿಗೆ ರೇಟಿಂಗ್ ನೀಡುವ ಸಂದೇಶ ಕಳಿಸುತ್ತವೆ. ಜೊತೆಗೆ ಬಳಕೆದಾರರ ಅಗತ್ಯಕ್ಕೆ ತಕ್ಕಂತೆ ಜಾಹೀರಾತುಗಳನ್ನು ಸಹ ಬಿತ್ತರಿಸುತ್ತವೆ. ಹೀಗಾಗಿ ಸ್ಮಾರ್ಟ್ ಫೋನ್ ಬಳಕೆದಾರರು ತಮ್ಮ ಖಾಸಗಿ ಮಾಹಿತಿ ಸೋರಿಕೆಯಾಗಬಾರದೆಂದರೆ ಷರತ್ತುಗಳನ್ನು ಮನನ ಮಾಡಿಕೊಳ್ಳುವುದು ಅತ್ಯಗತ್ಯವಾಗಿದೆ ಎಂದು ಸಂಶೋಧಕರು ಹೇಳುತ್ತಾರೆ.