ನವದೆಹಲಿ: ವಿದೇಶಾಂಗ ಸಚಿವಾಲಯದ ಪಾಸ್ಪೋರ್ಟ್ ಸೇವಾ ಕಾರ್ಯಕ್ರಮದ ಡಿಜಿಲಾಕರ್ ವೇದಿಕೆಯನ್ನು ಕೇಂದ್ರ ಸಚಿವ ವಿ. ಮುರಳಿಧರನ್ ಶುಕ್ರವಾರ ಉದ್ಘಾಟಿಸಿದ್ದಾರೆ.
ನಾಗರಿಕ ಸೇವೆಗಳಿಗೆ ಅಗತ್ಯವಾದ ದಾಖಲೆಗಳನ್ನು ಕಾಗದ ರಹಿತವಾಗಿ ಸಲ್ಲಿಸಲು ಇದರಿಂದ ಅನುಕೂಲವಾಗಿದೆ. ಪಾಸ್ಪೋರ್ಟ್ ಸೇವೆಗಳ ವಿತರಣೆಯಲ್ಲಿ ಭಾರಿ ಪರಿವರ್ತನೆ ಆಗಿದೆ ಎಂದು ಸಚಿವರು ಹೇಳಿದ್ದಾರೆ.
ಕಳೆದ ಆರು ವರ್ಷದಲ್ಲಿ ಸಮಗ್ರ ಬದಲಾವಣೆಯಾಗಿದ್ದು, ಮಾಸಿಕ ಒಂದು ಮಿಲಿಯನ್ ಗೂ ಅಧಿಕ ಅರ್ಜಿಗಳು ಸಲ್ಲಿಕೆಯಾಗ್ತಿವೆ. ಪಾಸ್ಪೋರ್ಟ್ ಸೇವಾ ಯೋಜನೆ ಮೂಲಕ 7 ಕೋಟಿಗೂ ಹೆಚ್ಚು ಪಾಸ್ಪೋರ್ಟ್ ವಿತರಿಸಲಾಗಿದೆ. ವ್ಯವಸ್ಥೆಯಲ್ಲಿ ಸುಧಾರಣೆ ತರಲಾಗಿದ್ದು, ಪಾಸ್ಪೋರ್ಟ್ ನಿಯಮಗಳನ್ನು ಸರಳಿಕರಣಗೊಳಿಸಲಾಗಿದೆ.
ಮನೆ ಬಾಗಿಲಿಗೆ ಸೇವೆ ಕಲ್ಪಿಸಲು ಕ್ರಮ ಕೈಗೊಂಡಿದ್ದು, ಮುಖ್ಯ ಅಂಚೆ ಕಚೇರಿಗಳಲ್ಲಿಯೂ ಪಾಸ್ಪೋರ್ಟ್ ಸೇವಾ ಕೇಂದ್ರಗಳನ್ನು ಆರಂಭಿಸಲಾಗಿದೆ. ಇವುಗಳೊಂದಿಗೆ 36 ಪಾಸ್ಪೋರ್ಟ್ ಕಚೇರಿಗಳು, 93 ಪಾಸ್ ಪೋರ್ಟ್ ಸೇವಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ನಾಗರಿಕ ಕೇಂದ್ರಿತ ವಿಧಾನಕ್ಕೆ ಒತ್ತು ನೀಡಲಾಗಿದ್ದು, ಕಾಗದರಹಿತ ಕ್ರಮ ಹೆಚ್ಚಿಸಿ ಡಿಜಿಲಾಕರ್ ಪ್ಲಾಟ್ಫಾರ್ಮ್ ಗೆ ಬದಲಾಗಿದ್ದೇವೆ ಎಂದು ಸಚಿವರು ತಿಳಿಸಿದ್ದಾರೆ.
ಪಾಸ್ಪೋರ್ಟ್ ಸೇವೆಗಳಿಗೆ ಅಗತ್ಯವಾದ ದಾಖಲೆಗಳನ್ನು ಪೇಪರ್ ಲೆಸ್ ಆಗಿ ಡಿಜಿಲಾಕರ್ ಮೂಲಕ ಸಲ್ಲಿಸಬಹುದಾಗಿದೆ. ಮೂಲ ದಾಖಲೆಗಳನ್ನು ಕೊಂಡೊಯ್ಯುವ ಅಗತ್ಯವಿಲ್ಲ. ಡಿಜಿಲಾಕರ್ ನಲ್ಲಿ ನೀಡಲಾದ ದಾಖಲೆಗಳನ್ನು ಮೂಲ ದಾಖಲೆಗಳ ರೀತಿಯಲ್ಲಿಯೇ ಪರಿಗಣಿಸಲಾಗುತ್ತದೆ.
ಭದ್ರತೆ ಹೆಚ್ಚಿಸಿ ವಿನ್ಯಾಸಗೊಳಿಸಲಾಗಿರುವ ಪಾಸ್ಪೋರ್ಟ್ ಗಳನ್ನು ನೀಡಲು ಕ್ರಮಕೈಗೊಳ್ಳಲಾಗಿದೆ. ವಂಚನೆಗೆ ಆಸ್ಪದವಿಲ್ಲದಂತೆ ಪಾಸ್ಪೋರ್ಟ್ ಗಳಲ್ಲಿ ದಾಖಲಾದ ಡೇಟಾವನ್ನು ಹಾಳುಮಾಡದಂತೆ ವಿನ್ಯಾಸಗೊಳಿಸಲಾಗುತ್ತದೆ. ಮುಂದಿನ ವರ್ಷಗಳಲ್ಲಿ ಬಯೋಮೆಟ್ರಿಕ್ ಪಾಸ್ಪೋರ್ಟ್ ಗಳು ಸ್ವಯಂ ಚಾಲಿತ ಇ – ಪಾಸ್ಪೋರ್ಟ್ ಗೇಟ್ ಗಳನ್ನು ವಿಮಾನ ನಿಲ್ದಾಣಗಳಲ್ಲಿ ಆರಂಭಿಸುವ ಚಿಂತನೆ ಇದೆ. ನಾಗರಿಕರು ಪಾಸ್ಪೋರ್ಟ್ ಸೇವೆಗಳಿಗಾಗಿ ದಾಖಲೆಗಳನ್ನು ತಮ್ಮೊಂದಿಗೆ ಕೊಂಡೊಯ್ಯಬೇಕಿಲ್ಲ. ಡಿಜಿಲಾಕರ್ ಸೌಲಭ್ಯ ಬಳಸಿಕೊಳ್ಳಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.