ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮೀಸಲಾತಿ ಹೋರಾಟ ಮತ್ತು ಬೇಡಿಕೆಗಳ ಕುರಿತು ಗಂಭೀರ ಚರ್ಚೆ ನಡೆದಿದೆ.
ವಿಸ್ತೃತ ಪರಾಮರ್ಶೆ ನಂತರ ಅಂತಿಮ ತೀರ್ಮಾನ ಕೈಗೊಳ್ಳಲು ಸಭೆಯಲ್ಲಿ ಚರ್ಚೆ ನಡೆದಿದೆ. ವಾಲ್ಮೀಕಿ ಸಮಾಜದ ಬೇಡಿಕೆ, ಕುರುಬ ಸಮುದಾಯ ಮೀಸಲಾತಿ ವಿಚಾರ, ಪಂಚಮಸಾಲಿ ಮೀಸಲಾತಿ, ಒಕ್ಕಲಿಗ ಸಮುದಾಯ ಮೊದಲಾದ ಸಮಾಜಗಳ ಮೀಸಲಾತಿ ವಿಚಾರ ಕುರಿತಾಗಿ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.
ಕಾನೂನು ತಜ್ಞರ ಸಲಹೆ ಪಡೆಯುವುದು, ನಾನಾ ತೀರ್ಪುಗಳು ಮತ್ತು ವರದಿಗಳ ಬಗ್ಗೆ ಅಧ್ಯಯನ ನಡೆಸುವುದು, ಸಂವಿಧಾನದ ಚೌಕಟ್ಟಿನಲ್ಲಿ ವಿಸ್ತೃತ ಚರ್ಚೆ ನಡೆಸಿ ಮತ್ತೊಮ್ಮೆ ಸಚಿವ ಸಂಪುಟ ಸಭೆಯಲ್ಲಿ ಸಮಾಲೋಚನೆ ನಡೆಸಲಾಗುವುದು. ಬಳಿಕ ತೀರ್ಮಾನ ಕೈಗೊಳ್ಳಲಾಗುವುದು ಎನ್ನಲಾಗಿದೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಂಪುಟ ಸಹೋದ್ಯೋಗಿಗಳಿಗೆ ಮೀಸಲಾತಿ ಕುರಿತು ಬಹಿರಂಗವಾಗಿ ಚರ್ಚಿಸಿದಂತೆ ಸೂಚನೆ ನೀಡಿದ್ದಾರೆ. ಯಾರು ಕೂಡ ಮೀಸಲಾತಿ ಬಗ್ಗೆ ಮಾತನಾಡಬಾರದು. ಸ್ವಾಮೀಜಿಗಳ ಮನವೊಲಿಸುವಂತೆ ಸಚಿವರಿಗೆ ಸಿಎಂ ತಿಳಿಸಿದ್ದು, ಈ ಕುರಿತಾಗಿ ವರಿಷ್ಠರೊಂದಿಗೆ ಚರ್ಚೆ ನಡೆಸೋಣ ಎಂದು ಹೇಳಿದ್ದಾರೆನ್ನಲಾಗಿದೆ.
ಸಂಪುಟ ಸಭೆಯ ಬಳಿಕ ಮಾಹಿತಿ ನೀಡಿದ ಗೃಹ, ಸಂಸದೀಯ ಸಚಿವ ಬಸವರಾಜ ಬೊಮ್ಮಾಯಿ, ಕಾನೂನು ತಜ್ಞರೊಂದಿಗೆ ಚರ್ಚಿಸಿ ಸಂವಿಧಾನದ ಚೌಕಟ್ಟಿನಲ್ಲಿ ಏನು ಮಾಡಬೇಕೆಂಬುದರ ಕುರಿತು ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.