ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಅವರ ಪುತ್ರ ಬಿ.ವೈ. ರಾಘವೇಂದ್ರ ಅವರ ವಿರುದ್ಧ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಗಂಭೀರ ಆರೋಪ ಮಾಡಿ ಪಕ್ಷದ ನೋಟಿಸ್ ಗೆ ಉತ್ತರ ನೀಡಿದ್ದಾರೆ.
ಆದರೆ, ಅವರ ಆರೋಪಗಳನ್ನು ಬಿಜೆಪಿ ವರಿಷ್ಠರು ಅಲ್ಲಗಳೆದಿದ್ದಾರೆ. ಸಿಎಂ ಯಡಿಯೂರಪ್ಪ ಅವರ ಬೆಂಬಲಕ್ಕೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ನಿಂತಿದ್ದಾರೆ. ಬಿಜೆಪಿ ಶಾಸಕ ಯತ್ನಾಳ್ ಮಾಡಿರುವ ಆರೋಪಗಳೆಲ್ಲ ಸತ್ಯಕ್ಕೆ ದೂರವಾದವು. ಅವರ ಆರೋಪಗಳನ್ನು ತಳ್ಳಿ ಹಾಕುವುದು ಸೂಕ್ತವೆಂದು ಅರುಣ್ ಸಿಂಗ್ ಹೇಳಿದ್ದಾರೆ.
ಸೂಕ್ತ ಸಮಯದಲ್ಲಿ ಯತ್ನಾಳ್ ಅವರ ವಿರುದ್ಧ ಶಿಸ್ತು ಸಮಿತಿ ಕ್ರಮಕೈಗೊಳ್ಳಲಿದೆ. ಬಿ.ವೈ. ವಿಜಯೇಂದ್ರ ರಾಜ್ಯ ಬಿಜೆಪಿಯ ಉಪಾಧ್ಯಕ್ಷರಾಗಿದ್ದಾರೆ. ಸಹಜವಾಗಿಯೇ ನಾವು ಉಪಾಧ್ಯಕ್ಷರನ್ನು ಬೆಂಬಲಿಸುತ್ತೇವೆ ಎಂದು ಹೇಳಿದ್ದಾರೆ.
ದೇಶದಲ್ಲಿ ಶೇಕಡ 99 ರಷ್ಟು ರೈತರು ಸಂತೋಷವಾಗಿದ್ದಾರೆ. ಹೊಸ ಕಾಯ್ದೆಯಿಂದ ಯಾವುದೇ ತೊಂದರೆಯಾಗುವುದಿಲ್ಲ. ಕಾಂಗ್ರೆಸ್ ಬೆಂಬಲ ಇರುವ ಕೆಲವರಿಂದ ಮಾತ್ರ ವಿರೋಧ ವ್ಯಕ್ತವಾಗುತ್ತಿದೆ. ದೆಹಲಿ ಹೋರಾಟಕ್ಕೆ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಪರೋಕ್ಷ ಬೆಂಬಲ ನೀಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ರೈತರ ಉದ್ದಾರ ಮಾಡಿಲ್ಲ ಎಂದು ಅರುಣ್ ಸಿಂಗ್ ಆರೋಪಿಸಿದ್ದಾರೆ.