ಕ್ರಿಪ್ಟೋಕರೆನ್ಸಿಯ ರಹಸ್ಯ ವಹಿವಾಟು ನಡೆಸಲು ಆರಂಭಿಸಿದಾಗ ಸ್ಟೆಫಾನ್ ಕಿನ್‌ಗೆ ಕೇವಲ 19 ವರ್ಷ ವಯಸ್ಸು.
ಆಸ್ಟ್ರೇಲಿಯಾದ ಕ್ವಿನ್ ಸ್ವಯಂ ಘೋಷಿತ ಗಣಿತ ತಜ್ಞನಾಗಿದ್ದು, 2016ರಲ್ಲಿ ಕಾಲೇಜು ವ್ಯಾಸಂಗಕ್ಕೆ ತಿಲಾಂಜಲಿ ಇಟ್ಟು, ನ್ಯೂಯಾರ್ಕ್‌ನಲ್ಲಿ ’ವರ್ಜಿಲ್ ಕ್ಯಾಪಿಟಲ್’ ಹೆಸರಿನಲ್ಲಿ ಹೂಡಿಕೆ ನಿಧಿ ವ್ಯವಹಾರಕ್ಕೆ ಚಾಲನೆ ಕೊಡಲು ಆರಂಭಿಸಿದ. ಜಗತ್ತಿನಾದ್ಯಂತ ಕ್ರಿಪ್ಟೋಕರೆನ್ಸಿ ಮಾರುಕಟ್ಟೆಗಳಲ್ಲಿ ಆಗುವ ಬೆಲೆ ವ್ಯತ್ಯಯವನ್ನು ನಿಯಂತ್ರಿಸುವ ’ಟೆಂಜಿನ್’ ಹೆಸರಿನ ಆಲ್ಗರಿದಮ್ ಒಂದನ್ನು ಅಭಿವೃದ್ಧಿಪಡಿಸಿರುವುದಾಗಿ ಹೇಳಿಕೊಂಡಿದ್ದ ಕಿನ್.
ಇದಾದ ಒಂದು ವರ್ಷದಲ್ಲಿಯೇ, ತನ್ನ ಮೂಲಕ ಆದ ಹೂಡಿಕೆಯೊಂದಕ್ಕೆ 500%ನಷ್ಟು ರಿಟರ್ನ್ಸ್ ಬಂದಿರುವುದಾಗಿ ಹೇಳಿಕೊಂಡ ಕಿನ್, ಬಹಳಷ್ಟು ಹೂಡಿಕೆದಾರರಿಗೆ ವಂಚಿಸಲು ಆರಂಭಿಸಿದ. ಇದರಿಂದ ಕಿನ್ ಅದೆಷ್ಟು ಸಿರಿವಂತ ಆದನೆಂದರೆ, ಸೆಪ್ಟೆಂಬರ್ 2019ರಲ್ಲಿ ತಿಂಗಳಿಗೆ $23,000 ಪಾವತಿಸಿ 64 ಅಂತಸ್ತಿನ ಐಶಾರಾಮಿ ಕಾಂಡೋ ಕಟ್ಟಡವೊಂದರ ಅಪಾರ್ಟ್ ಮೆಂಟ್‌ವೊಂದನ್ನು ಬಾಡಿಗೆಗೆ ಪಡೆದ.
ಆದರೆ ವಾಸ್ತವದಲ್ಲಿ ಈತ ಮಾಡಿದ್ದೆಲ್ಲಾ ವಂಚನೆ ಎಂದಿರುವ ವಕೀಲರು, ಪೋಂಜಿ ಹಗರಣದ ಮೂಲಕ ಈತ 100 ಹೂಡಿಕೆದಾರರಿಗೆ $90 ದಶಲಕ್ಷದಷ್ಟು ವಂಚನೆ ಮಾಡಿದ್ದಾನೆ ಎಂದು ತಿಳಿಸಿದ್ದಾರೆ.
ಸದ್ಯ ನ್ಯಾಯಾಂಗ ತನಿಖೆ ಎದುರಿಸುತ್ತಿರುವ ಕಿನ್, ತನ್ನ ತಪ್ಪೊಪ್ಪಿಕೊಂಡಿದ್ದಾನೆ. ಈತ ಮಾಡಿದ ತಪ್ಪಿಗೆ ಗರಿಷ್ಠ 20 ವರ್ಷಗಳ ಜೈಲು ಶಿಕ್ಷೆಯಾಗುವ ಸಾಧ್ಯತೆ ಇದ್ದು, $350,000ಗಳಷ್ಟು ದಂಡವನ್ನೂ ಪೀಕಬೇಕಾಗುತ್ತದೆ.