ಭಿವಾಂಡಿ: ಮಹಾರಾಷ್ಟ್ರದ ಭಿವಾಂಡಿಯ ರೈತ ಮತ್ತು ಉದ್ಯಮಿ ಜನಾರ್ಧನ್ ಭೋಯಿರ್ ಅವರು 30 ಕೋಟಿ ರೂಪಾಯಿಯ ಹೆಲಿಕಾಪ್ಟರ್ ಖರೀದಿಸಿದ್ದಾರೆ.
ಹಾಲು ಉತ್ಪಾದಕರಾಗಿರುವ ಜನಾರ್ಧನ್ ಡೈರಿ ವ್ಯವಹಾರದಲ್ಲಿ ತೊಡಗಿಕೊಂಡಿದ್ದು, ದೇಶದ ವಿವಿಧ ನಗರಗಳಿಗೆ ಪ್ರಯಾಣಿಸಲು ಹೆಲಿಕಾಪ್ಟರ್ ಖರೀದಿಸಿದ್ದಾರೆ. ಇದರಿಂದ ತಮ್ಮ ಪ್ರವಾಸ ಅನುಕೂಲವಾಗಲಿದೆ ಎಂದು ಅವರು ಹೇಳಿದ್ದಾರೆ.
ಡೈರಿ ವ್ಯವಹಾರಗಳಿಗೆ ಆಗಾಗ ಪಂಜಾಬ್, ಹರಿಯಾಣ, ರಾಜಸ್ಥಾನ ಮತ್ತು ಗುಜರಾತ್ ಗೆಪ್ರಯಾಣಿಸಬೇಕಿದೆ. ನಾನು ಭೇಟಿ ನೀಡಲಿರುವ ಎಲ್ಲಾ ನಗರಗಳಲ್ಲಿ ವಿಮಾನ ನಿಲ್ದಾಣಗಳು ಇರುವುದಿಲ್ಲ. ಹಾಗಾಗಿ ನಾನು ತಲುಪಬೇಕಾದ ಸ್ಥಳವನ್ನು ಬೇಗನೆ ತಲುಪಲು ಹೆಲಿಕಾಪ್ಟರ್ ಖರೀದಿಸಿದ್ದೇನೆ. ಇದರಿಂದ ಕೃಷಿ ಮತ್ತು ಡೈರಿ ವ್ಯವಹಾರಗಳಿಗೆ ಅನುಕೂಲವಾಗಲಿದೆ ಎಂದು ಅವರು ಹೇಳಿದ್ದಾರೆ.
ಭಾನುವಾರ ಜನಾರ್ಧನ್ ಊರಿಗೆ ಹೆಲಿಕಾಪ್ಟರ್ ನಲ್ಲಿ ಆಗಮಿಸಿದಾಗ ಜನರಿಂದ ಭವ್ಯ ಸ್ವಾಗತ ದೊರೆತಿದೆ. ಊರಿನ ಗ್ರಾಮ ಪಂಚಾಯಿತಿ ಸದಸ್ಯರಿಗೆ ಹೆಲಿಕಾಪ್ಟರ್ ನಲ್ಲಿ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ. ಜನಾರ್ಧನ್ 2.5 ಎಕರೆ ಜಮೀನಿನಲ್ಲಿ ಹೆಲಿಕಾಪ್ಟರ್ ಗೆ ಗ್ಯಾರೇಜ್, ಪೈಲೆಟ್ ರೂಮ್ ಮತ್ತು ತಂತ್ರಜ್ಞರ ಕೊಠಡಿಯೊಂದಿಗೆ ರಕ್ಷಣಾತ್ಮಕ ಗೋಡೆಯೊಂದಿಗೆ ಹೆಲಿಪ್ಯಾಡ್ ನಿರ್ಮಿಸಲು ವ್ಯವಸ್ಥೆ ಮಾಡಿದ್ದಾರೆ. ಮಾರ್ಚ್ 15 ರಂದು ಅವರಿಗೆ ಹೆಲಿಕಾಪ್ಟರ್ ತಲುಪಲಿದೆ. ಅಂದ ಹಾಗೆ, ಜನಾರ್ಧನ್ 100 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಶ್ರೀಮಂತ ರೈತರಾದ ಅವರು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿಯೂ ತೊಡಗಿಕೊಂಡಿದ್ದಾರೆ.