ನವದೆಹಲಿ: ಫೆಬ್ರವರಿ 15 ರ ಸೋಮವಾರ ಮಧ್ಯರಾತ್ರಿಯಿಂದಲೇ ದೇಶಾದ್ಯಂತ ದಿನಗಳಲ್ಲಿ ಫಾಸ್ಟ್ಯಾಗ್ ಕಡ್ಡಾಯ ಜಾರಿಗೆ ಬಂದಿದೆ. ಫಾಸ್ಟ್ಯಾಗ್ ಇಲ್ಲದ ವಾಹನಗಳಿಂದ ದುಪ್ಪಟ್ಟು ಶುಲ್ಕ ವಸೂಲಿ ಮಾಡಲಾಗುತ್ತಿದೆ. ಇದಕ್ಕೆ ಸಾರ್ವಜನಿಕರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಇದೇ ವೇಳೆ ಫಾಸ್ಟ್ಯಾಗ್ ಭದ್ರತಾ ಠೇವಣಿ ರದ್ದು ಮಾಡಿರುವ ಬಗ್ಗೆ ಮಾಹಿತಿ ನೀಡಲಾಗಿದೆ. ಕೇಂದ್ರ ಸಾರಿಗೆ ಸಚಿವಾಲಯ ಫಾಸ್ಟ್ಯಾಗ್ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಅಥವಾ ಭದ್ರತಾ ಠೇವಣಿ ಇಲ್ಲದಿದ್ದರೂ ಅದರ ಬಳಕೆಗೆ ಅವಕಾಶ ನೀಡಿದೆ.
ಜೀಪ್, ಕಾರ್ ಮತ್ತು ವ್ಯಾನ್ ಗಳು ಕನಿಷ್ಠ 200 ರೂಪಾಯಿ ಬ್ಯಾಲೆನ್ಸ್ ಉಳಿಸಿಕೊಳ್ಳಬೇಕಿತ್ತು. ಒಂದು ವೇಳೆ ಇಲ್ಲದಿದ್ದರೆ ಫಾಸ್ಟ್ಯಾಗ್ ಖಾತೆಯಿಂದ ಶುಲ್ಕ ಕಡಿತವಾಗುತ್ತಿರಲಿಲ್ಲ. ಅಲ್ಲದೆ, ಟೋಲ್ ಪ್ಲಾಜಾಗಳಲ್ಲಿ ಫಾಸ್ಟ್ಯಾಗ್ ಪಥದಲ್ಲಿ ವಾಹನ ಹಾದುಹೋದಾಗ ಎರಡುಪಟ್ಟು ಶುಲ್ಕವನ್ನು ಅನಿವಾರ್ಯವಾಗಿ ಪಾವತಿಸಬೇಕಿತ್ತು.
ಫಾಸ್ಟ್ಯಾಗ್ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಹೊಂದಬೇಕೆಂಬ ನಿಯಮವನ್ನು ರದ್ದು ಮಾಡಿ ಕೇಂದ್ರ ಸಾರಿಗೆ ಇಲಾಖೆ ವಾಹನ ಸವಾರರಿಗೆ ರಿಲೀಫ್ ನೀಡಿದೆ. ಲಘು ವಾಹನದ ಫಾಸ್ಟ್ಯಾಗ್ ಬಳಕೆದಾರರಿಗೆ ರಿಲೀಫ್ ನೀಡಲಾಗಿದ್ದು, ಕನಿಷ್ಠ ಬ್ಯಾಲೆನ್ಸ್ ಅಥವಾ ಭದ್ರತಾ ಠೇವಣಿ ಇಲ್ಲದಿದ್ದರೂ ಫಾಸ್ಟ್ಯಾಗ್ ಬಳಕೆಗೆ ಅವಕಾಶ ನೀಡಿದೆ. ಸೋಮವಾರ ಮಧ್ಯರಾತ್ರಿಯಿಂದ ಫಾಸ್ಟ್ಯಾಗ್ ಕಡ್ಡಾಯಗೊಳಿಸಿರುವ ಕೇಂದ್ರ ಸಾರಿಗೆ ಮಂತ್ರಾಲಯ ಲಘು ಮೋಟಾರು ವಾಹನದ ಫಾಸ್ಟ್ಯಾಗ್ ಬಳಕೆದಾರರಿಗೆ ಈ ಅವಕಾಶ ನೀಡಿದೆ ಎಂದು ಹೇಳಲಾಗಿದೆ.