ಬೆಳಗಾವಿ: ರಾಜ್ಯದಲ್ಲಿ ಬೆಳೆಯುವ ರಾಗಿ, ಜೋಳ, ಭತ್ತವನ್ನು ಬೆಂಬಲ ಬೆಲೆಯಲ್ಲಿ ಖರೀದಿಸಿ ಏಪ್ರಿಲ್ 1 ರಿಂದ ಪಡಿತರ ವ್ಯವಸ್ಥೆಯಲ್ಲಿ ವಿತರಣೆ ಮಾಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಹಾಗೂ ಗ್ರಾಹಕರ ವ್ಯವಹಾರಗಳ ಖಾತೆ ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫಲಾನುಭವಿಗಳಿಗೆ ನೀಡುವ ಪಡಿತರ ಪ್ರಮಾಣದಲ್ಲಿ ಕಡಿತ ಮಾಡುತ್ತಿಲ್ಲ. ಜನರು ಏನನ್ನು ಇಷ್ಟಪಡುತ್ತಾರೆಯೋ ಅದನ್ನೇ ಪಡಿತರದಲ್ಲಿ ನೀಡಲಾಗುವುದು. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಅಕ್ಕಿ, ಜೋಳ, ದಕ್ಷಿಣ ಕರ್ನಾಟಕ ಭಾಗದಲ್ಲಿ ಅಕ್ಕಿ, ರಾಗಿ ನೀಡಲಾಗುವುದು. ಭೌಗೋಳಿಕ ಆಹಾರ ಪದ್ಧತಿಗೆ ಅನುಗುಣವಾಗಿ ಪಡಿತರ ವಿತರಿಸಲಿದ್ದು, ಜನ ಸಂಪೂರ್ಣವಾಗಿ ಅಕ್ಕಿಯನ್ನು ಕೊಡಿ ಎಂದರೆ ಅಕ್ಕಿಯನ್ನೇ ಕೊಡುತ್ತೇವೆ ಎಂದು ಹೇಳಿದ್ದಾರೆ.
ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ರಾಜ್ಯ ಸಚಿವರನ್ನು ದೆಹಲಿಯಲ್ಲಿ ಭೇಟಿಯಾಗಿ ಈ ಬಗ್ಗೆ ಮನವಿ ಸಲ್ಲಿಸಿದ್ದೇನೆ. ಸದ್ಯ ಅಕ್ಕಿ ಮತ್ತು ಗೋಧಿ ವಿತರಿಸುತ್ತಿದ್ದು, ಇವುಗಳ ಪ್ರಮಾಣ ಕಡಿತ ಮಾಡಿ ರಾಗಿ ಅಥವಾ ಜೋಳ ನೀಡಲಾಗುವುದು ಎಂದು ಹೇಳಿದ್ದಾರೆ.