ನವದೆಹಲಿ: ಅಂತರ್ಜಾತಿ ಮದುವೆಗಳು ಜಾತಿ ಮತ್ತು ಸಮುದಾಯದ ಉದ್ವಿಗ್ನತೆಯನ್ನು ಕಡಿಮೆ ಮಾಡುತ್ತವೆ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಇಂತಹ ಮದುವೆಯಾದ ಯುವಕರು ಹಿರಿಯರಿಂದ ಬೆದರಿಕೆಗಳನ್ನು ಎದುರಿಸುತ್ತಿದ್ದಾರೆ. ನ್ಯಾಯಾಲಯಗಳು ಇಂತಹ ಯುವಕರ ನೆರವಿಗೆ ಬರುತ್ತವೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ವಿದ್ಯಾವಂತ ಯುವಕರು ಮತ್ತು ಯುವತಿಯರು ತಮ್ಮ ಜೀವನದ ಸಂಗಾತಿಗಳನ್ನು ಆಯ್ಕೆ ಮಾಡಿಕೊಳ್ಳುವ ಈ ದಿನಗಳು ಸಾಮಾಜಿಕ ನಿಯಮಗಳ ಬದಲಾವಣೆಗೆ ಕಾರಣವಾಗಿವೆ. ಸೂಕ್ಷ್ಮವಾಗಿರುವ ಅಂತರ್ಜಾತಿ ವಿವಾಹದಂತಹ ಪ್ರಕರಣಗಳನ್ನು ನಿರ್ವಹಿಸುವುದರ ಬಗ್ಗೆ ತನಿಖಾಧಿಕಾರಿಗಳಿಗೆ ಮಾರ್ಗಸೂಚಿ ಮತ್ತು ತರಬೇತಿ ಕಾರ್ಯಕ್ರಮಗಳನ್ನು ಪೊಲೀಸ್ ಅಧಿಕಾರಿಗಳು ನೀಡಬೇಕಿದೆ ಎಂದು ಹೇಳಲಾಗಿದೆ.
ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಹೃಷಿಕೇಶ್ ರಾಯ್ ಅವರ ನ್ಯಾಯಪೀಠ ಈ ಕುರಿತು ಆದೇಶ ನೀಡಿದ್ದು, ಕರ್ನಾಟಕದ ಬೆಳಗಾವಿ ಜಿಲ್ಲೆಯಲ್ಲಿ ಪೋಷಕರ ಇಚ್ಚೆಗೆ ವಿರುದ್ಧವಾಗಿ ಮದುವೆಯಾಗಿದ್ದ ಯುವತಿಯ ಪೋಷಕರು ಸಲ್ಲಿಸಿದ್ದ ಎಫ್ಐಆರ್ ಅನ್ನು ರದ್ದುಪಡಿಸಲಾಗಿದೆ.
ಜಾತಿ ಮತ್ತು ಸಮುದಾಯದ ನಡುವೆ ಇರುವ ಉದ್ವಿಗ್ನತೆ ಇಂತಹ ಕ್ರಮಗಳಿಂದ ಕಡಿಮೆಯಾಗುತ್ತದೆ. ಇಬ್ಬರೂ ವಯಸ್ಕ ವ್ಯಕ್ತಿಗಳು ವಿವಾಹಕ್ಕೆ ಒಪ್ಪಿಕೊಂಡ ನಂತರ ಕುಟುಂಬ, ಸಮುದಾಯ ಅಥವಾ ಕುಲದ ಒಪ್ಪಿಗೆ ಅಗತ್ಯವಿಲ್ಲ. ಅವರ ಒಪ್ಪಿಗೆಯನ್ನು ಧರ್ಮನಿಷ್ಠೆಯಿಂದ ನೋಡಬೇಕಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಆಯ್ಕೆಯ ವ್ಯಕ್ತಿಯನ್ನು ಮದುವೆಯಾಗುವ ಹಕ್ಕನ್ನು ಭಾರತದ ಸಂವಿಧಾನ ನೀಡಿದೆ. ತನಿಖಾಧಿಕಾರಿ ಹುಡುಗಿಯ ಹೇಳಿಕೆಯನ್ನು ದಾಖಲಿಸಲು ಬಯಸಿದ್ದಲ್ಲಿ ಆಕೆಯನ್ನು ಭೇಟಿಯಾಗಿ ಹೇಳಿಕೆ ಪಡೆಯಬಹುದಿತ್ತು ಎಂದು ಹೇಳಲಾಗಿದೆ.