ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಉತ್ತೇಜನ ನೀಡುವ ಸಲುವಾಗಿ ಕೇಂದ್ರ ಸರ್ಕಾರ 62 ಸಾವಿರ ಎಲೆಕ್ಟ್ರಿಕ್ ವಾಹನಗಳಿಗೆ ಸಬ್ಸಿಡಿಗಳ ಮೂಲಕ ಬೆಂಬಲವನ್ನ ನೀಡುವ ಉದ್ದೇಶವನ್ನ ಹೊಂದಿದೆ.
ಅಲ್ಲದೇ ದೇಶದಲ್ಲಿ ಎಲೆಕ್ಟ್ರಿಕ್ ಚಾರ್ಜಿಂಗ್ ಸೌಕರ್ಯಕ್ಕೂ ವ್ಯವಸ್ಥೆ ಮಾಡಲಾಗುತ್ತಿದೆ. ಈ ಎಲ್ಲಾ ಯೋಜನೆಗಾಗಿ ಕೇಂದ್ರ ಸರ್ಕಾರ ಒಟ್ಟು 10 ಸಾವಿರ ಕೋಟಿ ರೂಪಾಯಿಗಳ ಹಣವನ್ನ ಮೀಸಲಿಟ್ಟಿದೆ.
ಸಾರ್ವಜನಿಕ ಹಾಗೂ ವೈಯಕ್ತಿಕ ಬಳಕೆಗೆ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಕೇಂದ್ರ ಸರ್ಕಾರ ಉತ್ತೇಜನ ನೀಡುತ್ತಿದೆ. ಹೀಗಾಗಿ 7000 ಇ ಬಸ್, 5 ಲಕ್ಷ ತ್ರಿಚಕ್ರ ವಾಹನ, 55 ಸಾವಿರ ಇ ನಾಲ್ಕು ಚಕ್ರದ ವಾಹನಗಳು ಹಾಗೂ 10 ಲಕ್ಷ ಇ ಮೊಟಾರ್ ಸೈಕಲ್ಗಳಿಗೆ ಸಬ್ಸಿಡಿ ನೀಡುವ ಉದ್ದೇಶವನ್ನ ಸರ್ಕಾರ ಹೊಂದಿದೆ.
ಇದು ಮಾತ್ರವಲ್ಲದೇ ಎಲೆಕ್ಟ್ರಿಕ್ ವಾಹನ ಬಳಕೆದಾರರಿಗೆ ಚಾರ್ಜ್ ಮಾಡುವ ಆತಂಕವನ್ನ ದೂರ ಮಾಡುವ ಸಲುವಾಗಿ ಹೆಚ್ಚು ಹೆಚ್ಚು ಚಾರ್ಜಿಂಗ್ ವ್ಯವಸ್ಥೆಯನ್ನ ಮಾಡೋದಾಗಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಲೋಕಸಭೆಗೆ ಮಾಹಿತಿ ನೀಡಿದ್ದಾರೆ.
ಪ್ರಸ್ತುತ ಎಲೆಕ್ಟ್ರಿಕ್ ವಾಹನಗಳ ಮೇಲಿನ ಜಿಎಸ್ಟಿ ಶೇಕಡಾ 5ರಷ್ಟಿದ್ದು ವಾಹನಗಳ ಮೇಲಿನ ತೆರಿಗೆಯನ್ನ ಮತ್ತಷ್ಟು ಕಡಿಮೆ ಮಾಡುವ ಪ್ರಸ್ತಾಪ ಸಧ್ಯಕ್ಕೆ ಸರ್ಕಾರದ ಮುಂದಿಲ್ಲ ಎಂದೂ ಗಡ್ಕರಿ ಮಾಹಿತಿ ನೀಡಿದ್ದಾರೆ.