ಕೇಂದ್ರ ಚುನಾವಣಾ ಆಯೋಗ ಜನವರಿ 25 ರಿಂದ ಎಲೆಕ್ಟ್ರಾನಿಕ್ ಮತದಾರರ ಗುರುತಿನ ಚೀಟಿ ಅಭಿಯಾನ ಆರಂಭಿಸಿದ್ದು, ಇದುವರೆಗೆ ರಾಜ್ಯದಲ್ಲಿ 23,500 ಜನ ಹೊಸ ಮತದಾರರು ಇ – ಎಪಿಕ್ ಕಾರ್ಡ್ ಪಡೆದುಕೊಂಡಿದ್ದಾರೆ.
ಮೊದಲ ಹಂತದಲ್ಲಿ ಆದ್ಯತೆಯ ಮೇರೆಗೆ 18 ವರ್ಷ ಪೂರ್ಣಗೊಂಡ ಮತದಾರರಿಗೆ ಇ -ಎಪಿಕ್ ಕಾರ್ಡ್ ನೀಡಲಾಗ್ತಿದೆ. ಇನ್ನು ಕಾರ್ಡ್ ಪಡೆಯದವರು ಫೆಬ್ರವರಿ ಕೊನೆಯ ಒಳಗೆ ಆನ್ಲೈನ್ ಮೂಲಕ ಕಾರ್ಡ್ ಪಡೆಯಬಹುದಾಗಿದೆ. ಮಾರ್ಚ್ 1 ರ ನಂತರದಲ್ಲಿ ಈಗಾಗಲೇ ಗುರುತಿನ ಚೀಟಿ ಹೊಂದಿರುವ ಎಲ್ಲ ಮತದಾರರು ಕೂಡ ಎಲೆಕ್ಟ್ರಾನಿಕ್ ಮತದಾರರ ಗುರುತಿನ ಚೀಟಿ ಪಡೆಯಬಹುದಾಗಿದೆ.
ಎಲೆಕ್ಟ್ರಾನಿಕ್ ಮತದಾರರ ಗುರುತಿನ ಚೀಟಿ ಪಡೆಯುವವರು ತಮ್ಮ ಮೊಬೈಲ್ ಸಂಖ್ಯೆ ನೋಂದಾಯಿಸಬೇಕು. ತಮ್ಮ ಮನೆಯ ಇತರೆ ಸದಸ್ಯರ ಮೊಬೈಲ್ ಸಂಖ್ಯೆ ನೀಡಿದರೆ ಆಗಲ್ಲ. ಈಗಾಗಲೇ ಮತದಾರರ ಗುರುತಿನ ಚೀಟಿ ಪಡೆದವರ ಮೊಬೈಲ್ ಸಂಖ್ಯೆ ಜೋಡಣೆಯಾಗಿರುವುದರಿಂದ ಹೊಸ ಮತದಾರರು ಅದೇ ಮೊಬೈಲ್ ಸಂಖ್ಯೆ ನೀಡಿದಾಗ ಇ -ಎಪಿಕ್ ರಚನೆ ಆಗುವುದಿಲ್ಲವೆಂದು ಹೇಳಲಾಗಿದೆ.
ನ್ಯಾಷನಲ್ ವೋಟರ್ಸ್ ಸರ್ವಿಸ್ ಪೋರ್ಟಲ್ ನಲ್ಲಿ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ. ಎಲೆಕ್ಟ್ರಾನಿಕ್ ಪಿಡಿಎಫ್ ಅನ್ನು ಮೊಬೈಲ್ ಡಿಜಿ ಲಾಕರ್ ನಲ್ಲಿ ಇಟ್ಟುಕೊಳ್ಳಬಹುದಾಗಿದೆ. ಚುನಾವಣೆ ಸಂದರ್ಭದಲ್ಲಿ ಇದನ್ನು ತೋರಿಸಿ ಮತದಾನ ಮಾಡಬಹುದು ಎಂದು ಹೇಳಲಾಗಿದೆ.