ಕೇಂದ್ರ ಸರ್ಕಾರದ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ಬುಧವಾರದಂದು ಚಾಟ್ ಬಾಟ್ ಒಂದನ್ನು ಬಿಡುಗಡೆ ಮಾಡಿದ್ದು, ಕೃತಕ ಬುದ್ದಿಮತ್ತೆಯಿಂದ ಕಾರ್ಯ ನಿರ್ವಹಿಸುವ ಇದು ಉದ್ಯೋಗದ ನಿರೀಕ್ಷೆಯಲ್ಲಿದ್ದವರು ವಾಟ್ಸಾಪ್ ಮೂಲಕ ಕೇವಲ ‘hi’ ಎಂಬ ಸಂದೇಶ ಕಳುಹಿಸಿದರೆ ಲಭ್ಯವಿರುವ ಉದ್ಯೋಗಗಳ ಸಂಪೂರ್ಣ ಮಾಹಿತಿಯನ್ನು ನೀಡುತ್ತದೆ.
ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯ ವೆಬ್ ಸೈಟ್ ಶ್ರಮಿಕ್ ಶಕ್ತಿ ಮಂಚ್ ವಿವಿಧ ರಾಜ್ಯಗಳ ಕಿರು, ಸಣ್ಣ ಹಾಗೂ ಮಧ್ಯಮ ಸಂಸ್ಥೆಗಳೊಂದಿಗೆ ವಾಟ್ಸಾಪ್ ಮೂಲಕ ಸಂಪರ್ಕ ಹೊಂದುವ ಮೂಲಕ ಅವರಲ್ಲಿ ಲಭ್ಯವಿರುವ ಉದ್ಯೋಗಗಳ ಮಾಹಿತಿಯನ್ನು ಕಲೆ ಹಾಕುತ್ತದೆ. ಆ ಮೂಲಕ ಉದ್ಯೋಗದ ನಿರೀಕ್ಷೆಯಲ್ಲಿದ್ದವರು ತಮ್ಮ ವೃತ್ತಿ ಕೌಶಲ್ಯವನ್ನು ನಮೂದಿಸಿದರೆ ಅವರುಗಳಿರುವ ಸ್ಥಳದ ಸನಿಹದಲ್ಲಿ ಲಭ್ಯವಿರುವ ಉದ್ಯೋಗಗಳ ಮಾಹಿತಿ ಅವರುಗಳಿಗೆ ಲಭ್ಯವಾಗುತ್ತದೆ.
ಲಾಕ್ ಡೌನ್ ಸಂದರ್ಭದಲ್ಲಿ ಸಾವಿರಾರು ವಲಸೆ ಕಾರ್ಮಿಕರು ತಮ್ಮ ಸ್ವಂತ ಊರಿಗೆ ತೆರಳಿದ್ದು, ಇಂದಿಗೂ ಸಹ ಬಹಳಷ್ಟು ಮಂದಿ ಉದ್ಯೋಗವಿಲ್ಲದೆ ಒಂದೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ಇವರುಗಳಿಗೆ ನೆರವಾಗಲೆಂದೇ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ಈ ಚಾಟ್ ಬಾಟ್ ರೂಪಿಸಿದೆ.
ಲಾಕ್ ಡೌನ್ ಸಂದರ್ಭದಲ್ಲಿ ಸ್ವಂತ ಊರಿಗೆ ತೆರಳಿದವರೂ ಈಗ ಲಾಕ್ ಡೌನ್ ಸಡಿಲಿಕೆಯಾಗಿದ್ದರೂ ಸಹ ವಾಪಾಸ್ ತಾವು ಈ ಹಿಂದೆ ಕಾರ್ಯ ನಿರ್ವಹಿಸಿದ ಸ್ಥಳಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಸ್ವಂತ ಊರಿನಲ್ಲಿ ತಮ್ಮ ವೃತ್ತಿ ನೈಪುಣ್ಯತೆಗೆ ಲಭ್ಯವಿರುವ ಉದ್ಯೋಗಗಳ ಮಾಹಿತಿ ಅವರಿಗೆ ಲಭ್ಯವಾಗುತ್ತಿಲ್ಲ. ಹೀಗಾಗಿ ಈಗ ರೂಪಿಸಿರುವ ಚಾಟ್ ಬಾಟ್ ನೆರವಾಗುತ್ತದೆ ಎಂಬ ವಿಶ್ವಾಸವನ್ನು TIFAC ಕಾರ್ಯ ನಿರ್ವಾಹಕ ನಿರ್ದೇಶಕ ಶ್ರೀವಾತ್ಸವ್ ಹೊಂದಿದ್ದಾರೆ.
ಉದ್ಯೋಗ ಬಯಸುವವರು ವಾಟ್ಸಾಪ್ ಸಂಖ್ಯೆ 7208635370 ಹಾಗೂ ಸ್ಮಾರ್ಟ್ ಫೋನ್ ಹೊಂದಿಲ್ಲದೆ ಇರುವವರು ದೂರವಾಣಿ ಸಂಖ್ಯೆ 022-67380800 ಗೆ ಮಿಸ್ ಕಾಲ್ ಮಾಡುವ ಮೂಲಕ ಲಭ್ಯವಿರುವ ಉದ್ಯೋಗಗಳ ಮಾಹಿತಿ ಪಡೆಯಬಹುದಾಗಿದೆ.