ನಾನೀಗ ಕೂ ಅಪ್ಲಿಕೇಶನ್ನಲ್ಲಿ ಸಕ್ರಿಯನಾಗಿದ್ದೇನೆ. ಭಾರತೀಯ ಮೈಕ್ರೋ ಬ್ಲಾಗಿಂಗ್ ಫ್ಲಾರ್ಟ್ಫಾರಂ ಅದ್ಭುತವಾಗಿದ್ದು ಅಪರೂಪದ ಅಪ್ಡೇಟ್ಗಳನ್ನೂ ಹೊಂದಿದೆ ಎಂದು ಹೇಳುವ ಮೂಲಕ ಮಂಗಳವಾರ ಕೇಂದ್ರ ಸಚಿವ ಪಿಯೂಷ್ ಗೋಯಲ್ ಭಾರತೀಯರನ್ನ ಕೂ ಅಪ್ಲಿಕೇಶನ್ ಬಳಕೆಗೆ ಆಹ್ವಾನಿಸಿದ್ದರು.
ಕೇಂದ್ರ ಸಚಿವರ ಈ ಆಹ್ವಾನದ ಬಳಿಕ ಭಾರತೀಯರಿಗೆ ಕೂ ಅಪ್ಲಿಕೇಶನ್ ಬಗ್ಗೆ ಕುತೂಹಲ ಹೆಚ್ಚಾಗಿದೆ. ಹೀಗಾಗಿ ಕೂ ಬಗ್ಗೆ ಹುಡುಕಾಟ ಆರಂಭಿಸಿದ್ದಾರೆ.
ಕೂ ಅನ್ನೋದು ಒಂದು ಮೈಕ್ರೋಬ್ಲಾಗಿಂಗ್ ಸೋಶಿಯಲ್ ಮೀಡಿಯಾ ಅಪ್ಲಿಕೇಶನ್ ಆಗಿದ್ದು ಇದನ್ನ ಕಳೆದ ವರ್ಷ ಮಾರ್ಚ್ನಲ್ಲೇ ಅಭಿವೃದ್ಧಿಪಡಿಸಲಾಗಿದೆ. ಇದನ್ನ ಟ್ವಿಟರ್ನ ದೇಸಿ ಮಾದರಿ ಅಂತಾ ಹೇಳಿದ್ರೆ ತಪ್ಪಾಗಲಿಕ್ಕಿಲ್ಲ. ಪ್ರಧಾನಿ ಮೋದಿ ಆತ್ಮನಿರ್ಭರ್ ಭಾರತಕ್ಕೆ ಕರೆ ನೀಡಿದ ಬಳಿಕ ಈ ಅಪ್ಲಿಕೇಶನ್ ಹೆಚ್ಚಾಗಿ ಬೆಳಕಿಗೆ ಬಂದಿದೆ.
ಆದರೆ ಈ ಕೂ ಅಪ್ಲಿಕೇಶನ್ ಟ್ವಿಟರ್ನಲ್ಲಿ ತಮಿಳಿಗರನ್ನ ಒಂದು ಮಾಡಿದೆ. ಕೂ ಎಂಬ ಹೆಸರನ್ನೇ ವಸ್ತು ವಿಷಯವಾಗಿಸಿಕೊಂಡಿರುವ ತಮಿಳಿಗರು ಹಾಸ್ಯ ಚಟಾಕಿ ಹಾರಿಸಿದ್ದಾರೆ. ಇತ್ತ ತಮಿಳಿಗರಲ್ಲದವರೂ ಕೂಡ ಕೂ ಎಂದರೆ ಅರ್ಥವೇನು ಎಂದು ಹುಡುಕಾಟ ನಡೆಸಿದ್ದಾರೆ.
ಕೂ ಹುಡುಕಾಟ ಇಲ್ಲಿಗೆ ಕೊನೆಯಾಗಿಲ್ಲ. ಅನೇಕರು ಗೂಗಲ್ನಲ್ಲೂ ಕೂ ಅರ್ಥದ ಬಗ್ಗೆ ಹುಡುಕಾಟ ನಡೆಸಿದ್ದಾರೆ. ಕೂ ಎಂಬ ಅಪ್ಲಿಕೇಶನ್ನ್ನು 2020ರಲ್ಲಿ ಅಪ್ರಮೇಯ ರಾಧಾಕೃಷ್ಣ ಹಾಗೂ ಮಯಂಕ್ ಬ್ರಿದ್ವಾಕತಾ ಎಂಬವರು ಕಂಡು ಹಿಡಿದಿದ್ದಾರೆ. ಈ ಅಪ್ಲಿಕೇಶನ್ ಒಡೆತನವನ್ನ ಬಾಂಬಿನೇಟ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿ ಹೊಂದಿದೆ.