ಭಾರತೀಯರು ಆಭರಣ ಪ್ರಿಯರು. ಚಿನ್ನದ ಆಭರಣಗಳು ಆಪತ್ಕಾಲದಲ್ಲಿ ನೆರವಿಗೆ ಬರುತ್ತವೆ ಎನ್ನುವ ಕಾರಣಕ್ಕೆ ಭಾರತೀಯರು ಹೆಚ್ಚಿನ ಚಿನ್ನವನ್ನು ಖರೀದಿ ಮಾಡುತ್ತಾರೆ. ಅನೇಕರ ಮನೆಯಲ್ಲಿ ಹಳೆ ಕಾಲದ ಚಿನ್ನದ ಆಭರಣಗಳು ಹೆಚ್ಚಿನ ಪ್ರಮಾಣದಲ್ಲಿದೆ. ನಿಮ್ಮ ಮನೆಯಲ್ಲೂ ಚಿನ್ನವಿದ್ರೆ ಸರ್ಕಾರ ಬದಲಿಸುತ್ತಿರುವ ನಿಯಮದ ಬಗ್ಗೆ ತಿಳಿದುಕೊಳ್ಳಿ.
ಗೋಲ್ಡ್ ಮಾನಿಟೈಜೇಷನ್ ಸ್ಕೀಂನಲ್ಲಿ ಸರ್ಕಾರ ಬದಲಾವಣೆ ಮಾಡ್ತಿದೆ. ಎಲ್ಲ ಸರ್ಕಾರಿ ಬ್ಯಾಂಕ್ ಗಳನ್ನು ಈ ಯೋಜನೆಗೆ ಸೇರಿಸುತ್ತಿದೆ. ಪ್ರತಿ ಬ್ಯಾಂಕ್ ನ ಶೇಕಡಾ 50ರಷ್ಟು ಶಾಖೆಗಳಲ್ಲಿ ಜಿಎಂಎಸ್ ಯೋಜನೆಯಡಿ ಗ್ರಾಹಕರಿಗೆ ಸೇವೆ ನೀಡುವುದನ್ನು ಅನಿವಾರ್ಯ ಮಾಡಲಾಗ್ತಿದೆ. ಈ ಯೋಜನೆಯಡಿ ಆಭರಣಕಾರರು ಕೂಡ ಚಿನ್ನವನ್ನು ಠೇವಣಿ ತೆಗೆದುಕೊಳ್ಳುವ ಅಧಿಕಾರ ಪಡೆಯುತ್ತಾರೆ. ಹೆಚ್ಚು ಹೆಚ್ಚು ಜನರನ್ನು ಈ ಯೋಜನೆಯಲ್ಲಿ ಸೇರಿಸುವ ಉದ್ದೇಶವನ್ನೂ ಸರ್ಕಾರ ಹೊಂದಿದೆ.
ಈ ಯೋಜನೆಯಡಿ 10 ಗ್ರಾಂ ಚಿನ್ನ ಠೇವಣಿಯಿಡುವ ಸೌಲಭ್ಯ ಸಿಗಲಿದೆ. ಗೋಲ್ಡ್ ಮಾನಿಟೈಜೇಷನ್ ಸ್ಕೀಂ ಅಡಿ ಠೇವಣಿಯಿಟ್ಟ ಚಿನ್ನಕ್ಕೆ ಸಾಲ ಸುಲಭವಾಗಿ ಸಿಗಲಿದೆ. ಮನೆಯಲ್ಲಿಟ್ಟ ಚಿನ್ನವನ್ನು ದೇಶದ ಆರ್ಥಿಕತೆ ಜೊತೆ ಜೋಡಿಸಲು ಸರ್ಕಾರ 2015ರಲ್ಲಿ ಗೋಲ್ಡ್ ಮಾನಿಟೈಜೇಷನ್ ಸ್ಕೀಂ ಜಾರಿಗೆ ತಂದಿದೆ. ಈ ಸ್ಕೀಂ ಅಡಿ ನೀವು ಮನೆಯಲ್ಲಿಟ್ಟ ಚಿನ್ನವನ್ನು ಬ್ಯಾಂಕ್ ನಲ್ಲಿ ಠೇವಣಿಯಿಟ್ಟು ಅದಕ್ಕೆ ಬಡ್ಡಿ ಪಡೆಯಬಹುದು. ಇದಕ್ಕೆ ಲಾಕರ್ ಪಡೆಯುವ ಅವಶ್ಯಕತೆಯಿಲ್ಲ. ಬ್ಯಾಂಕ್ ನಲ್ಲಿ ನಿಮ್ಮ ಚಿನ್ನ ಸುರಕ್ಷಿತವಾಗಿರಲಿದೆ. ಬ್ಯಾಂಕ್ ನಲ್ಲಿಟ್ಟಿರುವ ಚಿನ್ನಕ್ಕೆ ಶೇಕಡಾ 2.25ರಷ್ಟು ಬಡ್ಡಿ ಸಿಗಲಿದೆ. ಈ ಯೋಜನೆಯಲ್ಲಿ 1.3 ವರ್ಷ, 2.4 ವರ್ಷ ಅಥವಾ 5 ವರ್ಷದ ಅವಧಿಗೆ ಚಿನ್ನವನ್ನು ಜಮಾ ಮಾಡಬಹುದು.