ನವದೆಹಲಿ: ರೈತರ ಅಭಿವೃದ್ಧಿಗಾಗಿ, ಅನ್ನದಾತ ಸ್ವಾಲಂಭಿಯಾಗಿ ತಮ್ಮ ಉತ್ಪನ್ನಗಳ ಮಾರಾಟ ಮಾಡಬೇಕು ಎಂಬ ಉದ್ದೇಶದಿಂದ ಮೂರು ಕೃಷಿ ಕಾಯ್ದೆಯನ್ನು ಜಾರಿಗೆ ತಂದಿದ್ದೇವೆ. ಇದರಿಂದ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಲೋಕಸಭೆಯಲ್ಲಿ ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯದ ಮೇಲೆ ಮಾತನಾಡಿದ ಪ್ರಧಾನಿ, ಕೃಷಿ ಕಾಯ್ದೆ, ರೈತರ ಹೋರಾಟದ ಬಗ್ಗೆ ಪ್ರಸ್ತಾಪಿಸಿದರು. ರೈತರ ಅಭಿವೃದ್ಧಿಗಾಗಿ ಕೃಷಿ ಕಾಯ್ದೆಗಳನ್ನು ಜಾರಿ ಮಾಡಿದ್ದೇವೆ. ಹೊಸ ಕಾಯ್ದೆಯಿಂದ ಯಾರಿಗೂ ತೊಂದರೆಯಾಗುವುದಿಲ್ಲ. ಕಾಯ್ದೆ ಜಾರಿ ಬಳಿಕ ದೇಶದಲ್ಲಿ ಯಾವುದೇ ಎಪಿಎಂಸಿ ಗಳನ್ನು ಮುಚ್ಚಲ್ಲ, ಬೆಳೆಗಳ ಬೆಂಬಲ ಬೆಲೆಯನ್ನೂ ರದ್ದು ಮಾಡಲ್ಲ, ಎಂ ಎಸ್ ಪಿ ಹೆಚ್ಚಳವಾಗಿದೆ. ಮಂಡಿಗಳ ಮೇಲೆ ಯಾವುದೇ ನಿರ್ಬಂಧವಿಲ್ಲ. ರೈತರಿಗೆ ಎಲ್ಲಿ ಲಾಭವಾಗುತ್ತದೆಯೋ ಅಲ್ಲಿಯೇ ಕೃಷಿ ಉತ್ಪನ್ನ ಮಾರಾಟ ಮಾಡಲು ಅವಕಾಶ ನೀಡಲಾಗಿದೆ ಎಂದರು.
ಅಂತರ್ ಜಾತಿ ವಿವಾಹ ಪ್ರಕರಣ; ಬಾಂಬೆ ಹೈಕೋರ್ಟ್ ನಿಂದ ಮಹತ್ವದ ತೀರ್ಪು
ಹೋರಾಟ ನಡೆಸುತ್ತಿರುವ ರೈತರ ಭಾವನೆಗಳನ್ನು ಗೌರವಿಸುತ್ತೇನೆ. ಆದರೆ ವಿಪಕ್ಷಗಳು ಕೃಷಿ ಕಾಯ್ದೆಗೆ ರಾಜಕೀಯ ಬಣ್ಣ ಬಳಿದು ರೈತರ ದಿಕ್ಕುತಪ್ಪಿಸಬಾರದು. ಕಾರಣವಿಲ್ಲದೇ ವಿಪಕ್ಷಗಳು ಕೃಷಿ ಕಾಯ್ದೆ ವಿರೋಧಿಸುತ್ತಿವೆ. ಕೃಷಿ ಕಾಯ್ದೆ ಜಾರಿಯಿಂದ ರೈತರ ಯಾವ ಹಕ್ಕನ್ನೂ ಕಸಿದುಕೊಳ್ಳಲಾಗಿಲ್ಲ. ಕಾಯ್ದೆಯಿಂದ ತೊಂದರೆ ಇದ್ದರೆ ಸೂಕ್ತ ಸಲಹೆ ನೀಡಿದರೆ ತಿದ್ದುಪಡಿ ಮಾಡಲು ಸಿದ್ಧರಿದ್ದೇವೆ ಇದರಲ್ಲಿ ಯಾವ ಹಿಂಜರಿಕೆಯಿಲ್ಲ. ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ನಮ್ಮ ಸರ್ಕಾರ ಕಾನೂನು ಜಾರಿತಂದಿದೆ. ನಮ್ಮ ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವಲ್ಲಿ ಸ್ವಾತಂತ್ರ್ಯ ಪಡೆದುಕೊಳ್ಳಬೇಕು. ರೈತರ ಹಿತಕ್ಕಾಗಿ ಕಾಯ್ದೆ ಜಾರಿ ಮಾಡಲಾಗಿದೆ ಇದರಲ್ಲಿ ಗೊಂದಲಗಳು ಬೇಡ ಎಂದು ಹೇಳಿದರು.