ನವದೆಹಲಿ: ರೈತರು ಖಾತೆಗೆ ಹಣ ಹಾಕುವಂತೆ ಕೇಳಿರಲಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಲೋಕಸಭೆಯಲ್ಲಿ ಮಾತನಾಡಿದ ಅವರು, ರೈತರು ಕೇಳದಿದ್ದರೂ ನಾವು ಕಿಸಾನ್ ಸಮ್ಮಾನ್ ಯೋಜನೆ ಆರಂಭಿಸಿದೆವು ಎಂದು ತಿಳಿಸಿದ್ದಾರೆ.
20 ರೂ., 25 ರೂ. ಪಿಂಚಣಿ ಪಡೆಯುವ ರೈತರು ಇದ್ದರು. ಕನಿಷ್ಠ ಒಂದು ಸಾವಿರ ರೂಪಾಯಿ ಪಿಂಚಣಿ ನಿಗದಿಪಡಿಸಿದ್ದೇವೆ. ಯಾರು ಕೂಡ ಪಿಂಚಣಿ ಹೆಚ್ಚಳ ಮಾಡುವಂತೆ ನಮ್ಮನ್ನು ಕೇಳಿಲ್ಲ ಎಂದು ಹೇಳಿದ್ದಾರೆ .
ಈ ದೇಶದ ಅತ್ಯಂತ ಪುರಾತನ ಪಕ್ಷ ಕಾಂಗ್ರೆಸ್. ಆರು ದಶಕಗಳಿಂದ ಈ ದೇಶವನ್ನು ಆಳಿದ ಕಾಂಗ್ರೆಸ್ ಈಗ ಇಬ್ಭಾಗವಾಗಿದೆ. ಪಕ್ಷದ ಸ್ಥಿತಿ ದುಸ್ಥಿತಿಗೆ ಇಳಿದಿದೆ. ಲೋಕಸಭೆಯಲ್ಲಿ ಒಂದು ನಿಲುವು, ರಾಜ್ಯಸಭೆಯಲ್ಲಿ ಮತ್ತೊಂದು ನಿಲುವು ತಳೆಯುತ್ತಿದೆ ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ಮೋದಿ ವಾಗ್ದಾಳಿ ನಡೆಸಿದ್ದಾರೆ.
ಬೆಳೆ ಬೆಳೆಯುವುದು ಮಾತ್ರ ಕೃಷಿಯಲ್ಲ, ಕೃಷಿ ನಮ್ಮ ಜೀವನ ಶೈಲಿಯಾಗಿದೆ. ನಮ್ಮ ಹಬ್ಬಗಳೊಂದಿಗೆ ಕೃಷಿ ಬೆರೆತಿದೆ. ಸ್ವಾತಂತ್ರ್ಯ ನಂತರದಲ್ಲಿ ಶೇಕಡ 28 ರಷ್ಟು ಕೃಷಿಕರು ಇದ್ದರು. ಕೃಷಿ ಜೀವನದ ಭಾಗವಾಗಿದೆ. ನಮ್ಮ ಸಂಸ್ಕೃತಿಯೊಂದಿಗೆ ಬೆರೆತುಹೋಗಿದೆ ಎಂದು ಹೇಳಿದ್ದಾರೆ.
ಹೊಸ ಕಾನೂನು ಜಾರಿಗೆ ಬೇಡವೋ ಅವರು ಬಳಸಬೇಡಿ. ಅವರಿಗಾಗಿ ಹಳೆಯ ವ್ಯವಸ್ಥೆ ಇದ್ದೇ ಇರುತ್ತದೆ. ನಿಂತ ನೀರು ರೋಗಗಳನ್ನು ಸೃಷ್ಟಿಸುತ್ತದೆ. ಹರಿಯುತ್ತಿರುವ ನೀರು ಜೀವನ ಸೃಷ್ಟಿಸುತ್ತದೆ. ನಾವು ನಿಂತ ನೀರಾಗಿ ಇರಲು ಸಾಧ್ಯವಿಲ್ಲ. ಜವಾಬ್ದಾರಿಯುತವಾದ ನಿರ್ಧಾರ ತೆಗೆದುಕೊಳ್ಳಬೇಕು. ದೇಶದ ಅವಶ್ಯಕತೆಗೆ ತಕ್ಕಂತೆ ನಿರ್ಣಯ ಮಾಡಬೇಕು. ಇಂತಹ ಸ್ಥಿತಿಯಲ್ಲಿ ದೇಶ ಮುಂದೆ ಸಾಗಲಾರದೆ ವ್ಯವಸ್ಥೆಯಲ್ಲಿ ಸಕಾರಾತ್ಮಕ ಬದಲಾವಣೆ ಬೇಕಿದೆ ಎಂದು ಹೇಳಿದ್ದಾರೆ.