ಪಾಕಿಸ್ತಾನದ ಜೈಲಿನಲ್ಲಿ ಬರೋಬ್ಬರಿ 18 ವರ್ಷಗಳ ಕಾಲ ಕಳೆದು ಕಳೆದ ಕೆಲ ದಿನಗಳ ಹಿಂದಷ್ಟೇ ತಾಯ್ನಾಡು ಭಾರತಕ್ಕೆ ಹಸೀನಾ ಬೇಗಂ ಎಂಬ ವೃದ್ಧೆ ವಾಪಸ್ಸಾಗಿದ್ದ ಸುದ್ದಿ ನಿಮಗೆ ನೆನಪಿರಬಹುದು.
ತಮ್ಮ ಹುಟ್ಟೂರು ಔರಂಗಾಬಾದ್ಗೆ ವಾಪಸ್ಸಾಗುತ್ತಿದ್ದಂತೆಯೇ ನನಗೆ ಸ್ವರ್ಗಕ್ಕೆ ಬಂದಂತೆ ಭಾಸವಾಗುತ್ತಿದೆ ಎಂದು ಹಸೀನಾ ಹೇಳಿಕೊಂಡಿದ್ದರು. ಆದರೆ ತಾಯ್ನಾಡಿಗೆ ಮರಳಿ ಕೆಲವೇ ವಾರಗಳ ಬಳಿಕ ಅಂದರೆ ಮಂಗಳವಾರ ಹಸೀನಾ ಬೇಗಂ ಹೃದಯಾಘಾತದಿಂದ ನಿಧನರಾಗಿದ್ದಾರೆ.
65 ವರ್ಷದ ಹಸೀನಾ 18 ವರ್ಷಗಳ ಹಿಂದೆ ತನ್ನ ಪತಿಯ ಕುಟುಂಬಸ್ಥರನ್ನ ಭೇಟಿಯಾಗಲು ಪಾಕಿಸ್ತಾನಕ್ಕೆ ತೆರಳಿದ್ದರು. ಆದರೆ ಪಾಕಿಸ್ತಾನದಲ್ಲೇ ಪಾಸ್ಪೋರ್ಟ್ ಕಳೆದುಕೊಂಡ ಕಾರಣದಿಂದ ಹಸೀನಾ ಬೇಗಂರನ್ನ ಪಾಕ್ ಜೈಲಿಗೆ ಕಳಿಸಲಾಗಿತ್ತು. ಬರೋಬ್ಬರಿ 18 ವರ್ಷಗಳ ಕಾಲ ಪಾಕ್ ಜೈಲಿನಲ್ಲೇ ಜೀವನ ಸವೆಸಿದ್ದ ಹಸೀನಾ ಬೇಗಂ 2 ವಾರಗಳ ಹಿಂದಷ್ಟೇ ತಾಯ್ನಾಡಿಗೆ ಮರಳಿದ್ದರು.
ಎದೆನೋವು ಕಾಣಿಸಿಕೊಂಡ ಬಳಿಕ ಹಸೀನಾ ತನ್ನ ಕುಟುಂಬಸ್ಥರ ಜೊತೆ ಹೇಳಿಕೊಂಡಿದ್ದಾರೆ. ಕೂಡಲೇ ಆಕೆಯನ್ನ ವೈದ್ಯರ ಬಳಿಗೆ ಕರೆದೊಯ್ಯುವ ಪ್ರಯತ್ನ ಮಾಡಲಾಗಿತ್ತಾದರೂ ಹಸೀನಾ ಹೃದಯಾಘಾತದಿಂದ ನಿಧನರಾಗಿದ್ದಾರೆ.