ಬೆಂಗಳೂರು: ಶಾಲಾ ಶುಲ್ಕ ಕಡಿತ ಆದೇಶ ವಾಪಸ್ ಪಡೆಯುವಂತೆ ಖಾಸಗಿ ಶಾಲೆಗಳ 8 ಸಂಘಟನೆಗಳು ಒತ್ತಾಯ ಮಾಡಿವೆ.
ಶುಲ್ಕ ಕಡಿತ ಆದೇಶವನ್ನು ವಾಪಸ್ ಪಡೆಯದಿದ್ದರೆ ಫೆಬ್ರವರಿ 23 ರಂದು ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಲಾಗಿದೆ. ಕೊರೋನಾ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಶಾಲಾ ಶುಲ್ಕವನ್ನು ಕಡಿತಗೊಳಿಸಿದ ಕ್ರಮಕ್ಕೆ ಖಾಸಗಿ ಶಾಲೆಗಳ 8 ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಶುಲ್ಕ ಕಡಿತ ಆದೇಶ ವಾಪಸ್ ಪಡೆಯುವ ನಿರ್ಧಾರವನ್ನು ಪುನರ್ ಪರಿಶೀಲಿಸಬೇಕು ಎಂದು ಒತ್ತಾಯಿಸಲಾಗಿದೆ.
ಖಾಸಗಿ ಶಾಲೆಗಳ ಸಂಘಟನೆಗಳ ಪ್ರತಿನಿಧಿಗಳು ಸಭೆ ಸೇರಿ ಸಮಾಲೋಚನೆ ನಡೆಸಿದ್ದು, ಫೆಬ್ರವರಿ 23ರ ವರೆಗೆ ಗಡುವು ನೀಡಲಾಗಿದೆ. ತಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಲಾಗಿದೆ. ಖಾಸಗಿ ಶಾಲೆಗಳಲ್ಲಿ ಮಕ್ಕಳ ಪೋಷಕರಿಂದ ಶೇಕಡ 30 ರಷ್ಟು ಬೋಧನಾ ಶುಲ್ಕ ಕಡಿತಗೊಳಿಸಿ ಶೇಕಡ 70 ರಷ್ಟು ಶುಲ್ಕ ಪಡೆದುಕೊಳ್ಳಲು ತಿಳಿಸಲಾಗಿದೆ. ಇದನ್ನು ಹೊರತುಪಡಿಸಿ ಇನ್ಯಾವುದೇ ಶುಲ್ಕ ಪಡೆಯುವಂತಿಲ್ಲವೆಂದು ಸರ್ಕಾರ ಹೇಳಿದ್ದು, ಈ ಆದೇಶವನ್ನು ವಾಪಸ್ ಪಡೆಯಬೇಕೆಂದು ಒತ್ತಾಯಿಸಲಾಗಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗೆ ಪ್ರತ್ಯೇಕ ಅನುದಾನ ನೀಡಬೇಕೆಂದು ಕೂಡ ಆಗ್ರಹಿಸಲಾಗಿದೆ.