ನವದೆಹಲಿ: ಕೇಂದ್ರ ಸರ್ಕಾರಿ ನೌಕರರಿಗೆ ಇದೇ ತಿಂಗಳಲ್ಲಿ ಸಿಹಿ ಸುದ್ದಿ ಸಿಗುವ ಸಾಧ್ಯತೆಯಿದೆ. ಕೇಂದ್ರದ 50 ಲಕ್ಷ ಉದ್ಯೋಗಿಗಳು ಮತ್ತು 61 ಲಕ್ಷ ಪಿಂಚಣಿದಾರರಿಗೆ ಸರ್ಕಾರ ಉಡುಗೊರೆ ನೀಡಲಿದೆ.
ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಡಿಎ ಈ ತಿಂಗಳು ಘೋಷಣೆಯಾಗಲಿದೆ. ಡಿಎ ನೀಡುವ ಬಗ್ಗೆ ದೀರ್ಘ ಸಮಯದಿಂದ ಚರ್ಚೆಯಾಗ್ತಿದೆ. ಶೇಕಡ 4 ರಷ್ಟು ಡಿಎ ಹೆಚ್ಚಳವನ್ನು ಕೇಂದ್ರ ಘೋಷಿಸಬಹುದು ಎನ್ನಲಾಗಿದೆ.
ಇದು ಕೇಂದ್ರ ನೌಕರರ ವೇತನದ ಮೇಲೆ ನೇರ ಪರಿಣಾಮ ಬೀರಲಿದೆ. ಕಾರ್ಮಿಕ ಇಲಾಖೆ ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕವನ್ನು ಘೋಷಿಸಿದೆ. ಇದು ಕೇಂದ್ರೀಯ ಉದ್ಯೋಗಿಗಳಲ್ಲಿ ಡಿಎ ಹೆಚ್ಚಳದ ಭರವಸೆ ಮೂಡಿಸಿದೆ. ಡಿಎ ದರವನ್ನು ಎಐಸಿಪಿಐ ಮಾತ್ರ ನಿರ್ಧರಿಸುತ್ತದೆ. ಸರ್ಕಾರ ಶೇಕಡ 4 ರಷ್ಟು ಡಿಎ ಹೆಚ್ಚಿಸಬಹುದು ಎಂದು ಹೇಳಲಾಗುತ್ತಿದೆ.
7 ನೇ ವೇತನ ಆಯೋಗದ ಪ್ರಕಾರ, ಕೇಂದ್ರ ಉದ್ಯೋಗಿಗಳಿಗೆ ಡಿಎ ಶೇಕಡ 4 ರಷ್ಟು ಹೆಚ್ಚಳವಾದ್ರೆ, ಅವರ ಪ್ರಯಾಣ ಭತ್ಯೆ ಕೂಡ ಶೇಕಡಾ 4 ರಷ್ಟು ಹೆಚ್ಚಾಗುತ್ತದೆ. ಜುಲೈ 1,2020 ರಿಂದ ಜನವರಿ 1,2021 ರವರೆಗೆ ಕೇಂದ್ರ ನೌಕರರಿಗೆ ಡಿಎ ನೀಡಲಾಗಿಲ್ಲ. ಕೊರೋನಾ ಬಿಕ್ಕಟ್ಟಿನಿಂದಾಗಿ 2020 ರ ಏಪ್ರಿಲ್‌ನಲ್ಲಿ ಕೇಂದ್ರ ಡಿಎ ರದ್ದು ಮಾಡಿತ್ತು. ಕೇಂದ್ರದ ಪ್ರಕಟಣೆಯ ಪ್ರಕಾರ, ಜೂನ್ 2021 ರವರೆಗೆ ಕೇಂದ್ರ ಉದ್ಯೋಗಿಗಳಿಗೆ ಡಿಎ ದೊರೆಯುವುದಿಲ್ಲ ಎನ್ನಲಾಗಿದೆ.