ಕೊರೊನಾ ರೋಗಿಯ ಎಂಜಲನ್ನ ನನಗೆ ನೀಡೋದ್ರ ಮೂಲಕ ಸಹೋದ್ಯೋಗಿ ಕೊಲೆ ಮಾಡಲು ಯತ್ನಿಸಿದ್ದಾನೆ ಎಂದು ಕಾರು ಡೀಲರ್ಶಿಪ್ ಮಾಲೀಕ ಆರೋಪಿಸಿದ್ದಾರೆ. ಟರ್ಕಿಯ ಇಬ್ರಾಹಿಂ ಉರ್ವೆಂದಿ ಎಂಬವರು ಈ ರೀತಿ ಆರೋಪಿಸಿ ತನ್ನ ಕಂಪನಿಯ ಉದ್ಯೋಗಿ ಮೇಲೆ ದೂರನ್ನ ದಾಖಲಿಸಿದ್ದಾರೆ.
ಉರ್ವೆಂದಿ ಕಾರು ಮಾರಾಟದ 22 ಲಕ್ಷ ಹಣವನ್ನ ಉದ್ಯೋಗಿಗೆ ನೀಡಿದ್ದರು. ಅಲ್ಲದೇ ಈ ಹಣವನ್ನ ಕಚೇರಿಗೆ ತಲುಪಿಸುವಂತೆ ಸೂಚನೆ ನೀಡಿದ್ದರು.
ನಾನು ಆತನನ್ನ ಸಂಪೂರ್ಣವಾಗಿ ನಂಬಿದ್ದೆ. ಹಣವನ್ನ ಕಚೇರಿಗೆ ತಲುಪಿಸುವಂತೆ ಅನೇಕ ಬಾರಿ ಆತನಿಗೆ ಕರೆ ಮಾಡಿದ್ದೆ. ಆದರೆ ಆತ ಆ ದಿನವನ್ನ ಮುಂದೂಡುತ್ತಲೇ ಬಂದಿದ್ದ.
ಅಲ್ಲದೇ ಆತ ನನಗೆ ಕೋವಿಡ್ ರೋಗಿಯ ಎಂಜಲನ್ನ ಪಾನೀಯಕ್ಕೆ ಮಿಶ್ರಣ ಮಾಡಿ ಕುಡಿಸಲು ಯತ್ನಿಸಿದ್ದ. ಈ ಮೂಲಕ ನನ್ನನ್ನ ಸೋಂಕಿಗೆ ಸಿಲುಕಿಸಿ ಕೊಲೆ ಮಾಡಬೇಕು ಅನ್ನೋದು ಆತನ ಪ್ಲಾನ್ ಆಗಿತ್ತು. ಅದೃಷ್ಟವಶಾತ್ ನಾನು ಆ ಪಾನೀಯವನ್ನ ಸೇವಿಸಿಲ್ಲ ಎಂದು ಬಾಸ್ ಹೇಳಿದ್ದಾರೆ.
ಕೋವಿಡ್ ರೋಗಿಯ ಎಂಜಲಿಗಾಗಿ ಆರೋಪಿ 5 ಸಾವಿರ ರೂಪಾಯಿ ಪಾವತಿ ಮಾಡಿದ್ದ ಎನ್ನಲಾಗಿದೆ. ನನ್ನ ಕಂಪನಿಯ ಮತ್ತೊಬ್ಬ ಸಹೋದ್ಯೋಗಿ ಈ ಬಗ್ಗೆ ಮಾಹಿತಿ ನೀಡಿದ್ದರಿಂದ ವಿಷಯ ಬೆಳಕಿಗೆ ಬಂತು ಎಂದು ಉರ್ವೆಂದಿ ಹೇಳಿಕೊಂಡಿದ್ದಾರೆ. ಆರೋಪಿ ಸಹೋದ್ಯೋಗಿ ವಿರುದ್ಧ ಪೊಲೀಸರು ಕೊಲೆ ಯತ್ನದ ಕೇಸ್ ದಾಖಲಿಸಿದ್ದಾರೆ.