ಬೆಂಗಳೂರು: ತೀವ್ರ ವಿರೋಧದ ನಡುವೆಯೂ ವಿಧಾನ ಪರಿಷತ್ನಲ್ಲಿ ಧ್ವನಿಮತದ ಮೂಲಕ ಗೋಹತ್ಯೆ ನಿಷೇಧ ವಿಧೇಯಕ ಅಂಗೀಕರಿಸಲಾಗಿದೆ.
ವಿಧಾನಪರಿಷತ್ ನಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದು, ಪ್ರತಿಪಕ್ಷಗಳ ಆಕ್ಷೇಪದ ನಡುವೆಯೂ ವಿಧಾನ ಪರಿಷತ್ನಲ್ಲಿ ಗೋಹತ್ಯೆ ನಿಷೇಧ ಬಿಲ್ ಪಾಸ್ ಮಾಡಲಾಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಗದ್ದಲ ಉಂಟುಮಾಡಿದ್ದಾರೆ. ಮಸೂದೆಯ ಪ್ರತಿಗಳನ್ನು ಹರಿದು ವಿರೋಧ ಪಕ್ಷದ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಚಿವ ಪ್ರಭು ಚವ್ಹಾಣ್ ವಿಧೇಯಕ ಮಂಡಿಸಲು ಮುಂದಾಗುತ್ತಿದ್ದಂತೆ ವಿಪಕ್ಷಗಳ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದಾರೆ. ಗೋಹತ್ಯೆ ನಿಷೇಧ ಮಸೂದೆ ಕುರಿತು ಚರ್ಚೆ ನಡೆದಿದ್ದು, ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ಪಶುಗಳ ತಳಿ ಅಳಿವಿನಂಚಿನಲ್ಲಿವೆ. ಗೋಹತ್ಯೆ ತಡೆಯುವುದರ ಜೊತೆಗೆ ಪಶುಗಳ ಸಂರಕ್ಷಣೆ ಮಾಡಲಾಗುವುದು. ಮುಂಬರುವ ಬಜೆಟ್ನಲ್ಲಿ ಇದಕ್ಕೆಂದೇ ವಿಶೇಷ ಅನುದಾನವನ್ನು ಸರ್ಕಾರ ಮೀಸಲಿಡಲಿದೆ. ದೇಶದ 14 ರಾಜ್ಯಗಳಲ್ಲಿ ಈ ಕಾನೂನು ಜಾರಿಯಲ್ಲಿದೆ. 13 ವರ್ಷ ಮೇಲ್ಪಟ್ಟ ಪಶುಗಳಿಗೆ ಈ ಕಾನೂನು ಅನ್ವಯಿಸುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಕಾಂಗ್ರೆಸ್ ಸದಸ್ಯ ಬಿ.ಕೆ. ಹರಿಪ್ರಸಾದ್ ಮಾತನಾಡಿ, ಈ ಕಾಯ್ದೆ ತರುವುದಕ್ಕೆ ಯಾಕಿಷ್ಟು ಆತುರ ಎಂದು ಪ್ರಶ್ನಿಸಿದ್ದಾರೆ. ಸಿ.ಎಂ. ಇಬ್ರಾಹಿಂ ಸೇರಿ ಅನೇಕ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದಾರೆ.