ಕೊರೊನಾದಿಂದ ಗುಣಮುಖರಾದ ಕೆಲವರಿಗೆ ಅಪರೂಪದ ಶಿಲೀಂದ್ರ ಸೋಂಕು ಕಂಡು ಬರುತ್ತಿರುವುದು ವೈದ್ಯ ಸಮೂಹದ ಆತಂಕಕ್ಕೆ ಕಾರಣವಾಗಿದೆ. ಅದರಲ್ಲೂ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಇದು ತೀವ್ರವಾಗುತ್ತಿದ್ದು, ಇದರಿಂದ ಅಂಗಾಂಗ ವೈಫಲ್ಯ, ದೃಷ್ಟಿ ದೋಷ ಮೊದಲಾದ ಸಮಸ್ಯೆಗಳ ಜೊತೆಗೆ ಸಾವೂ ಕೂಡಾ ಸಂಭವಿಸಬಹುದು ಎನ್ನಲಾಗಿದೆ.
ಮುಂಬೈನಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗುತ್ತಿದ್ದು, ಧುಲೆಯ ಶೈಲಾ ಸೋನಾರ್ ಎಂಬವರು ಆಗಸ್ಟ್ 1 ರಂದು ಕೊರೊನಾ ಸೋಂಕಿಗೊಳಗಾಗಿದ್ದರು. 15 ದಿನಗಳ ಬಳಿಕ ಆಕೆ ಚೇತರಿಸಿಕೊಂಡಿದ್ದು, ಅದಾದ ಕೆಲ ದಿನಗಳಲ್ಲೇ ಬಾಯಿಯಲ್ಲಿ ನೋವು ಕಂಡು ಬಂದಿದೆ. ಜೊತೆಗೆ ಊತ ಸಹ ಉಂಟಾಗಿದೆ. ಆದರೆ ಈ ಮಹಿಳೆ ಸಾಮಾನ್ಯ ಸಮಸ್ಯೆಯೆಂದು ಇದನ್ನು ನಿರ್ಲಕ್ಷಿಸಿ ಸ್ಥಳೀಯ ವೈದ್ಯರ ಬಳಿ ಚಿಕಿತ್ಸೆ ಪಡೆದುಕೊಳ್ಳುವ ಜೊತೆಗೆ ನೋವು ನಿವಾರಕ ಮಾತ್ರೆಯನ್ನು ಸೇವಿಸಿದ್ದಾರೆ.
ಆದರೆ ದಿನೇ ದಿನೇ ಶಿಲೀಂದ್ರ ವ್ಯಾಪಿಸತೊಡಗಿದ್ದು, ಡಿಸೆಂಬರ್ ನಲ್ಲಿ ಆಕೆಯ ಆರೋಗ್ಯ ಪರಿಸ್ಥಿತಿ ಉಲ್ಬಣಿಸಿದೆ. ಕೂಡಲೇ ಕುಟುಂಬಸ್ಥರು ಆಂಬುಲೆನ್ಸ್ ಮೂಲಕ ಮುಂಬೈನ ಪರೇಲ್ ನಲ್ಲಿರುವ ಗ್ಲೋಬಲ್ ಆಸ್ಪತ್ರೆಗೆ ಶೈಲಾರನ್ನು ದಾಖಲಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಶಿಲೀಂದ್ರ ಸೋಂಕು ವ್ಯಾಪಕವಾಗಿದ್ದ ಕಾರಣ ಅನಿವಾರ್ಯವಾಗಿ ಶಸ್ತ್ರ ಚಿಕಿತ್ಸೆ ನೆರವೇರಿಸಲು ವೈದ್ಯರು ನಿರ್ಧರಿಸಿದ್ದು, ಇದರಿಂದ ಆಕೆಯ ಪ್ರಾಣ ಉಳಿದಂತಾಗಿದೆ. ಒಂದೊಮ್ಮೆ ಇದನ್ನು ಮತ್ತಷ್ಟು ದಿನಗಳ ಕಾಲ ನಿರ್ಲಕ್ಷಿಸಿದ್ದರೆ ಮೆದುಳಿಗೂ ವ್ಯಾಪಿಸಿ ಸಾವು ಸಂಭವಿಸುವ ಸಾಧ್ಯತೆ ಇತ್ತೆಂದು ವೈದ್ಯ ಡಾ.ಮಿಲಿಂದ್ ಹೇಳಿದ್ದಾರೆ.
ಇದೇ ರೀತಿಯ ಮತ್ತೊಂದು ಪ್ರಕರಣದಲ್ಲಿ ಕೊರೊನಾದಿಂದ ಚೇತರಿಸಿಕೊಂಡ 30 ವರ್ಷದ ವ್ಯಕ್ತಿಯೊಬ್ಬರಿಗೆ ಕೆಲ ದಿನಗಳ ಬಳಿಕ ಕಣ್ಣಿನ ಸೋಂಕು ಉಂಟಾಗಿದ್ದು, ಮುಂಬೈನ ನಾನಾವತಿ ಆಸ್ಪತ್ರೆಯಲ್ಲಿ ಆ ವ್ಯಕ್ತಿಯ ಕಣ್ಣನ್ನೇ ತೆಗೆಯಲಾಗಿದೆ. ಈವರೆಗೆ ಕೊರೊನಾದಿಂದ ಚೇತರಿಸಿಕೊಂಡ ಸುಮಾರು 50 ಮಂದಿಯಲ್ಲಿ ಇಂತಹ ತೊಂದರೆಗಳು ಕಾಣಿಸಿಕೊಂಡಿವೆ ಎಂದು ವೈದ್ಯರು ತಿಳಿಸಿದ್ದಾರೆ. ಹಾಗಾಗಿ ಕೊರೊನಾದಿಂದ ಚೇತರಿಸಿಕೊಂಡ ಬಳಿಕವೂ ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೆ ನಿರ್ಲಕ್ಷ್ಯ ಮಾಡದೆ ತಜ್ಞ ವೈದ್ಯರ ಸಲಹೆ ಪಡೆಯುವುದು ಸೂಕ್ತ ಎಂದು ತಿಳಿಸುತ್ತಾರೆ.