ನವದೆಹಲಿ: ಉತ್ತರಾಖಂಡ್ ನ ಚಮೋಲಿ ಜಿಲ್ಲೆಯಲ್ಲಿ ಭಾರೀ ಹಿಮಪಾತದಿಂದ ದೌಲಿನದಿಯಲ್ಲಿ ಪ್ರವಾಹವುಂಟಾದ ಪರಿಣಾಮ ಹಲವು ಮನೆಗಳು ನೀರಿನಲ್ಲಿ ಕೊಚ್ಚಿ ಹೋಗಿದ್ದು, 150 ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ ಉತ್ತರಾಖಂಡದ ಜೊತೆ ಇಡೀ ದೇಶದ ಜನರಿದ್ದಾರೆ ಎಂದು ಧೈರ್ಯ ತುಂಬಿದ್ದಾರೆ.
ಉತ್ತರಾಖಂಡದಲ್ಲಿ ಸಂಭವಿಸಿದ ದುರಂತದ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದೇನೆ. ಇಡೀ ದೇಶವೇ ಉತ್ತರಾಖಂಡದ ಜೊತೆ ನಿಲ್ಲಲಿದೆ. ಇಡೀ ದೇಶದ ಜನರು ಉತ್ತರಾಖಂಡದ ಜನತೆಯ ಸುರಕ್ಷತೆಗಾಗಿ ಪ್ರಾರ್ಥಿಸುತ್ತಾರೆ. ಉತ್ತರಾಖಂಡದಲ್ಲಿ ಎನ್ ಡಿ ಆರ್ ಎಫ್ ನಿಯೋಜನೆ, ಸುರಕ್ಷತಾ ಕಾರ್ಯಾಚರಣೆ ಕೈಗೊಳ್ಳಲಾಗುವುದು. ಕೇಂದ್ರದಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಉತ್ತರಾಖಂಡ್ ಹಿಮ ಕುಸಿತದಿಂದ ಭಾರೀ ಅನಾಹುತ: ಮಾಹಿತಿ ಪಡೆದು ಕ್ರಮಕ್ಕೆ ಸೂಚಿಸಿದ ಪ್ರಧಾನಿ ಮೋದಿ
ಇದೇ ವೇಳೆ ಟ್ವೀಟ್ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಉತ್ತರಾಖಂಡದಲ್ಲಿನ ನೈಸರ್ಗಿಕ ವೀಕೋಪದ ಬಗ್ಗೆ ಅಲ್ಲಿನ ಸಿಎಂ ತ್ರಿವೇಂದ್ರ ಸಿಂಗ್ ಅವರಿಂದ ಮಾಹಿತಿ ಪಡೆಯುತ್ತಿದ್ದೇನೆ. ದೇವಭೂಮಿಯ ರಕ್ಷಣೆಗಾಗಿ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು. ಸಂಬಂಧಪಟ್ಟ ಅಧಿಕಾರಿಗಳು ಸಂತ್ರಸ್ತರ ಪ್ರಾಣ ರಕ್ಷಣೆಗಾಗಿ ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.