ಬೆಂಗಳೂರು: ವರದಕ್ಷಿಣೆಗಾಗಿ ಗಂಡನ ಮನೆಯವರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಮಹಿಳಾ ಐಪಿಎಸ್ ಅಧಿಕಾರಿ ವರ್ತಿಕಾ ಕಟಿಯಾರ್ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸರಿಗೆ ದೂರು ನೀಡಿದ್ದಾರೆ.
ಐಎಫ್ಎಸ್ ಅಧಿಕಾರಿ ಪತಿ ನಿತಿನ್ ಸುಭಾಷ್ ಮತ್ತು ಪೋಷಕರ ಸಹಿತ 7 ಮಂದಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ರಾಜ್ಯ ಕೆಎಸ್ಆರ್ಪಿ ತರಬೇತಿ ಮತ್ತು ಸಂಶೋಧನಾ ಕೇಂದ್ರದ ಅಧಿಕಾರಿಯಾಗಿರುವ ವರ್ತಿಕಾ ಕಟಿಯಾರ್ ನಿತಿನ್ ಸಿಭಾಷ್ ಅವರನ್ನು ಪ್ರೀತಿಸಿ 2011 ರಲ್ಲಿ ಮದುವೆಯಾಗಿದ್ದರು.
ನಿತಿನ್ ಕೊಲಂಬೋ ಸೇರಿದಂತೆ ವಿದೇಶಿ ರಾಯಭಾರ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಮದುವೆಯಾದ ಕೆಲ ದಿನಗಳ ನಂತರ ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿದೆ. ಈಗ ವರದಕ್ಷಿಣೆ ಕಿರುಕುಳ ದೂರು ನೀಡಿದ್ದಾರೆ. ಮದುವೆ ಸಂದರ್ಭದಲ್ಲಿ, ನಂತರದಲ್ಲಿ ನಿತಿನ್ ಪೋಷಕರು ಚಿನ್ನು ಕೊಡುವಂತೆ ಬಲವಂತ ಮಾಡಿದ್ದರು. ಅಲ್ಲದೇ ಮೂರು ಲಕ್ಷ ರೂಪಾಯಿ ಹಣ ಕೊಡುವಂತೆ ಕೇಳಿದ್ದರು. ಹಣ ಮತ್ತು ಚಿನ್ನವನ್ನು ಕೊಡಲಾಗಿತ್ತು. ಹಬ್ಬಕ್ಕೆ ಉಡುಗೊರೆ ಕೊಡದಿದ್ದರೆ ಡೈವೋರ್ಸ್ ಕೊಡುವುದಾಗಿ ಬೆದರಿಕೆ ಹಾಕಿದ್ದಾರೆ. ನಿತಿನ್ ನನ್ನಿಂದ 35 ಲಕ್ಷ ಹಣ ಪಡೆದಿದ್ದು ಇನ್ನೂ ಹೆಚ್ಚಿನ ಹಣಕ್ಕೆ ಪೀಡಿಸುತ್ತಿದ್ದಾರೆ. ಅವರಿಗೆ ಮದ್ಯ ಸೇವನೆ, ಧೂಮಪಾನ ಅಭ್ಯಾಸವನ್ನು ನಿಲ್ಲಿಸುವಂತೆ ಹೇಳಿದಾಗ ಹಲ್ಲೆ ಮಾಡಿದ್ದಾರೆ ಎಂದು ಮಹಿಳಾ ಐಪಿಎಸ್ ಅಧಿಕಾರಿ ವರ್ತಿಕಾ ಕಟಿಯಾರ್ ದೂರು ನೀಡಿದ್ದಾರೆ. ಎಫ್ಐಆರ್ ದಾಖಲಿಸಿ ಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.