ಬೆಂಗಳೂರು: ಕುರುಬರಿಗೆ ಎಸ್.ಟಿ. ಮೀಸಲಾತಿ ನೀಡುವಂತೆ ಒತ್ತಾಯಿಸಿ ಬೆಂಗಳೂರಿನ ಮಾದಾವರ ಬಳಿ ಆಯೋಜಿಸಿರುವ ಸಮಾವೇಶಕ್ಕೆ ಜನಸಾಗರವೇ ಹರಿದುಬಂದಿದೆ.
ಮಾದಾವರ ಸಮೀಪದ ಬಿಐಇಸಿಯಲ್ಲಿ ಆಯೋಜಿಸಿರುವ ಸಮಾವೇಶದಲ್ಲಿ ಭಾಗವಹಿಸಲು ರಾಜ್ಯದ ವಿವಿಧ ಕಡೆಯಿಂದ ಲಕ್ಷಾಂತರ ಜನ ಆಗಮಿಸಿದ್ದಾರೆ. ಸಾವಿರಾರು ವಾಹನಗಳಲ್ಲಿ ಜನ ಆಗಮಿಸಿದ್ದು, ಸಂಚಾರ ದಟ್ಟಣೆ ಉಂಟಾಗಿದೆ. ತುಮಕೂರು ರೋಡ್ ಫುಲ್ ಜಾಮ್ ಆಗಿದ್ದು, ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ವಾಹನಗಳು ಸಾಲುಗಟ್ಟಿ ನಿಂತಿವೆ.
ಕಾಗಿನೆಲೆ ನಿರಂಜನಾನಂದಪುರಿ ಶ್ರೀಗಳ ನೇತೃತ್ವದಲ್ಲಿ ಸಮಾವೇಶ ನಡೆಯಲಿದೆ. ಸಮುದಾಯದ ರಾಜಕಾರಣಿಗಳು, ಮಠಾಧೀಶರು ಸೇರಿದಂತೆ ಸಮಾವೇಶದಲ್ಲಿ 10 ಲಕ್ಷ ಜನರು ಭಾಗಿಯಾಗುವ ಸಾಧ್ಯತೆ ಇದೆ. ಜನವರಿ 15 ರಂದು ಕಾಗಿನೆಲೆಯಲ್ಲಿ ಶ್ರೀಗಳು ಪಾದಯಾತ್ರೆ ಆರಂಭಿಸಿದ್ದರು. ಫೆಬ್ರವರಿ 4 ರಂದು ಬೆಂಗಳೂರಿನ ಫ್ರೀಡಂಪಾರ್ಕ್ ನಲ್ಲಿ ಪಾದಯಾತ್ರೆ ಅಂತ್ಯವಾಗಿತ್ತು. ಕುರುಬ ಸಮುದಾಯವನ್ನು ಮೀಸಲಾತಿಗೆ ಸೇರಿಸಬೇಕೆಂದು ಪಾದಯಾತ್ರೆ ನಡೆಸಿದ ನಂತರ ಇಂದು ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ.