ಬೆಂಗಳೂರು: ಸ್ನೇಹಿತರ ಜೊತೆ ಡ್ಯಾನ್ಸ್ ಮಾಡುವಂತೆ ಗಂಡ ಕಿರುಕುಳ ನೀಡಿದ್ದರಿಂದ ನೊಂದ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವರ್ತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
38 ವರ್ಷದ ಮಹಿಳೆ ಆತ್ಮಹತ್ಯೆ ಮಾಡಿಕೊಂಡವರು. ಆಕೆಯ ಪತಿ ಭಾಸ್ಕರ್ ನನ್ನು ಪೊಲೀಸರು ಬಂಧಿಸಿದ್ದಾರೆ. ಖಾಸಗಿ ಕಂಪನಿ ಉದ್ಯೋಗಿಯಾಗಿರುವ ಆರೋಪಿ 15 ವರ್ಷಗಳ ಹಿಂದೆ ಮದುವೆಯಾಗಿದ್ದು, ದಂಪತಿಗೆ 11 ವರ್ಷದ ಮಗ ಇದ್ದಾನೆ.
ಪತ್ನಿಗೆ ದಿನವೂ ಕಿರುಕುಳ ನೀಡುತ್ತಿದ್ದ. ಆತ ಬೇರೆ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ವಿಚಾರಕ್ಕೆ ದಂಪತಿ ನಡುವೆ ಜಗಳ ನಡೆಯುತ್ತಿತ್ತು. ವೀಕೆಂಡ್ ಪಾರ್ಟಿಗಳಿಗೆ ಪತ್ನಿಯನ್ನು ಕರೆದುಕೊಂಡು ಹೋಗುತ್ತಿದ್ದ ಆರೋಪಿ ಸ್ನೇಹಿತರೊಂದಿಗೆ ಡ್ಯಾನ್ಸ್ ಮಾಡುವಂತೆ ಪೀಡಿಸುತ್ತಿದ್ದ. ಇದಕ್ಕೆ ನಿರಾಕರಿಸಿದಾಗ ದೈಹಿಕ, ಮಾನಸಿಕ ಹಿಂಸೆ ನೀಡುತ್ತಿದ್ದ. ಗಂಡನ ಕಿರುಕುಳದಿಂದ ಬೇಸತ್ತ ಮಹಿಳೆ ಮನೆಯಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.