ಬೆಂಗಳೂರು: ವಿಧಾನಸಭಾ ಅಧಿವೇಶನದ ಕೊನೇ ದಿನವಾದ ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯ ಪ್ರಸ್ತಾಪಕ್ಕೆ ಉತ್ತರ ನೀಡಿದ್ದು, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹಲವು ಹೇಳಿಕೆಗಳಿಗೆ ತಿರುಗೇಟು ನಿಡಿದ್ದಾರೆ.
ವಿಧಾನಸಭೆಯಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ, ಸಿದ್ದರಾಮಯ್ಯ ಮನಸ್ಸಿಗೆ ಬಂದಂತೆ ಮಾತನಾಡಿದ್ದಾರೆ ಅವರಿಂದ ಅಭಿವೃದ್ಧಿ ಬಗ್ಗೆ ಮಾತ್ರ ಟೀಕೆ ನಿರೀಕ್ಷಿಸಿದ್ದೆವು. ಆದರೆ ಅವರು ಸರ್ಕಾರದ ಬಗ್ಗೆ ಮಾತನಾಡಿದ್ದಾರೆ. ಹೀಗಾಗಿ ನಾನು ಈ ಬಗ್ಗೆ ಮಾತನಾಡುವುದು ಅನಿವಾರ್ಯ. ಕಾಂಗ್ರೆಸ್ ಗೆ ಬಹುಮತವಿಲ್ಲದಿದ್ದರೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರಚನೆ ಮಾಡಿದರು. ಬಳಿಕ ಯಾವ ರೀತಿ ಆಡಳಿತ ನಡೆಸಿದರು ಎಂಬುದು ರಾಜ್ಯಕ್ಕೆ ಗೊತ್ತಿರುವ ವಿಚಾರ. ಮೈತ್ರಿ ಸರ್ಕಾರದಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡಿದ್ದೆ, ಕಿರುಕುಳ ಅನುಭವಿಸಿದ್ದೆ ಎಂದು ಕುಮಾರಸ್ವಾಮಿಯವರೇ ಹೇಳಿದ್ದಾರೆ. ಕುಮಾರಸ್ವಾಮಿಯವರಿಗೆ ಆಡಳಿತ ನಡೆಸಲು ಬಿಡಲಿಲ್ಲ ಎಂದು ಹೇಳುವ ಮೂಲಕ ಕುಮಾರಸ್ವಾಮಿ ಪರ ಬ್ಯಾಟ್ ಬೀಸಿದರು.
ಶೌಚಾಲಯವೂ ಇಲ್ಲ, ಡ್ಯೂಟಿ ಅವಧಿಯೂ ಹೆಚ್ಚು; ಸಾರಿಗೆ ಸಚಿವರಿಗೆ ತಮ್ಮ ಸಂಕಷ್ಟ ತಿಳಿಸಿದರು ಮಹಿಳಾ ಕಂಡಕ್ಟರ್
ಬಿಜೆಪಿ ಸರ್ಕಾರ ರಚನೆ ವೇಳೆ ಮಂತ್ರಿ ಮಂಡಲ ರಚನೆ ಸಾಧ್ಯವಾಗಿರಲಿಲ್ಲ. ಆಗ ಭೀಕರ ಪ್ರವಾಹ ಪರಿಸ್ಥಿತಿ ಇತ್ತು. ನಾನೊಬ್ಬನೇ ಓಡಾಡಿ ಪರಿಹಾರ ಕಾರ್ಯ ಕೈಗೊಂಡೆ. ಬಳಿಕ ಕೊರೊನಾ ಲಾಕ್ ಡೌನ್ ನಿಂದ ಸಂಕಷ್ಟ ಎದುರಾಯಿತು. ಸಿದ್ದರಾಮಯ್ಯನವರೇ ನೀವು ಏನು ಹೋಳುತ್ತಿರೋ ಅದೆಲ್ಲವನ್ನೂ ಮಾಡುವ ಶಕ್ತಿ ನಮಗಿದೆ. ಹಲವು ಸವಾಲುಗಳನ್ನು ಎದುರಿಸಿ ಬಂದಿದ್ದೇನೆ. ಸವಾಲುಗಳನ್ನು ಎದುರಿಸಿಯೇ ನಾನು ಗಟ್ಟಿಯಾಗಿದ್ದೇನೆ ಎಂದರು.
ಲೋಕಸಭಾ ಚುನಾವಣೆಯಿಂದ ಕಾಂಗ್ರೆಸ್ ಸೋಲನುಭವಿಸಿದೆ. ಉಪಚುನಾವಣೆಯಲ್ಲೂ ಬಿಜೆಪಿ ಗೆಲುವು ಸಾಧಿಸಿದೆ. ಮುಂದಿನ ಮೂರು ಉಪಚುನಾವಣೆಯಲ್ಲೂ ಗೆಲುವು ನಮ್ಮದೇ. ಈ ಬಗ್ಗೆ ಸದನದಲ್ಲಿ ಸವಾಲು ಹಾಕುತ್ತೇನೆ ಎಂದು ಸಿಎಂ ಹೇಳಿದರು. ಇದಕ್ಕೆ ಕೋಪಗೊಂಡ ಸಿದ್ದರಾಮಯ್ಯ ನಾವು ಅಧಿಕಾರದಲ್ಲಿದ್ದಾಗ ನೀವು ಚುನಾವಣೆಗಳಲ್ಲಿ ಸೋತಿರಲಿಲ್ಲವೇ ಎಂದು ಪ್ರಶ್ನಿಸಿದರು. ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಸಿಎಂ ಯಡಿಯೂರಪ್ಪ ಇತ್ತೀಚಿನ ಚುನಾವಣೆಗಳಲ್ಲಿ ಕಾಂಗ್ರೆಸ್ ದಯನೀಯ ಸೋಲನುಭವಿಸಿದೆ. ಈ ಚುನಾವಣೆಯಿಂದ ನಾಯಕತ್ವವನ್ನೇ ಕಳೆದುಕೊಂಡಿದೆ ಎಂದರು.
ಇದಕ್ಕೆ ಉತ್ತರಿಸಿದ ಸಿದ್ದರಾಮಯ್ಯ ಹಾಗಿದ್ದರೆ ಸರ್ಕಾರ ವಿಸರ್ಜನೆ ಮಾಡಿ. ಎಲ್ಲರೂ ಮತ್ತೆ ಚುನಾವಣೆ ಎದುರಿಸೋಣ. ಆ ವೇಳೆ ಯಾರು ಅಧಿಕಾರಕ್ಕೆ ಬರಲಿದ್ದಾರೆ ನೋಡೋಣ ಎಂದರು. ಇದೇ ವೇಳೆ ಆಡಳಿತ ಹಾಗೂ ವಿಪಕ್ಷ ಸದಸ್ಯರ ನಡುವೆ ಗದ್ದಲ-ಕೋಲಾಹಲ ನಡೆಯಿತು.