ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ರಾಬರ್ಟ್’ ಮಾರ್ಚ್ 11 ರಂದು ಬಿಡುಗಡೆಯಾಗಲಿದೆ. ಅಂದ ಹಾಗೆ, ‘ರಾಬರ್ಟ್’ ಕನ್ನಡದಲ್ಲಿ ಮಾತ್ರವಲ್ಲದೆ, ತೆಲುಗಿನಲ್ಲಿಯೂ ತೆರೆಕಾಣಲಿದೆ.
ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ‘ರಾಬರ್ಟ್’ ಚಿತ್ರದ ವಿತರಣೆ ಹಕ್ಕುಗಳು ದಾಖಲೆಯ ಮೊತ್ತಕ್ಕೆ ಮಾರಾಟವಾಗಿವೆ. ಚದಲವಾಡ ಶ್ರೀನಿವಾಸರಾವ್ ಅವರ ಶ್ರೀ ವೆಂಕಟೇಶ್ವರ ಮೂವೀಸ್ ಸಂಸ್ಥೆಯು ‘ರಾಬರ್ಟ್’ ವಿತರಣೆ ಹಕ್ಕು ಪಡೆದುಕೊಂಡಿದೆ. 400 ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ‘ರಾಬರ್ಟ್’ ತೆಲುಗು ಅವತರಣಿಕೆ ಬಿಡುಗಡೆ ಮಾಡಲಿದೆ.
‘ರಾಬರ್ಟ್’ ತೆಲುಗು ಚಿತ್ರದ ಟೀಸರ್ ಬುಧವಾರ ಬಿಡುಗಡೆಯಾಗಿದ್ದು, ಹಲ್ಚಲ್ ಸೃಷ್ಟಿಸಿದೆ. ಮೊದಲಿಗೆ ಮಾರ್ಚ್ 11 ರಂದು ‘ರಾಬರ್ಟ್’ ತೆಲುಗು ಅವತರಣಿಕೆ ಬಿಡುಗಡೆಗೆ ನಿರ್ಬಂಧ ಹೇರಬೇಕು ಎಂಬ ಒತ್ತಾಯ ಕೇಳಿ ಬಂದಿತ್ತು. ಆದರೆ, ಕರ್ನಾಟಕ ಚಲನಚಿತ್ರ ಮಂಡಳಿ ದರ್ಶನ್ ಮತ್ತು ನಿರ್ಮಾಪಕ ಉಮಾಪತಿ ಶ್ರೀನಿವಾಸಗೌಡ ದೂರು ನೀಡಿದ್ದರು. ಚೆನ್ನೈನಲ್ಲಿ ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿಗಳ ಒಕ್ಕೂಟದ ಸಭೆ ನಡೆದಿದ್ದು, ‘ರಾಬರ್ಟ್’ ಬಿಡುಗಡೆಗೆ ಒಪ್ಪಿಗೆ ನೀಡಲಾಗಿದೆ. ಅಂತೆಯೇ ತೆಲುಗಿನಲ್ಲಿಯೂ ‘ರಾಬರ್ಟ್’ ಬಿಡುಗಡೆಯಾಗಲಿದೆ.