ನವದೆಹಲಿ: ಪ್ರತಿಭಟನೆ ಹಿಂಸಾತ್ಮಕ ಕೃತ್ಯಗಳಲ್ಲಿ ಭಾಗಿಯಾಗುವವರಿಗೆ ಸರ್ಕಾರಿ ಉದ್ಯೋಗ ಸಿಗುವುದಿಲ್ಲ. ಅಲ್ಲದೆ, ಅಂತಹ ವ್ಯಕ್ತಿಗಳಿಗೆ ಸರ್ಕಾರದ ಸೌಲಭ್ಯಗಳನ್ನು ನೀಡಲಾಗುವುದಿಲ್ಲವೆಂದು ಬಿಹಾರ ಸರ್ಕಾರದಿಂದ ಸುತ್ತೋಲೆ ಹೊರಡಿಸಲಾಗಿದೆ.
ಪ್ರತಿಭಟನೆ, ಹಿಂಸಾತ್ಮಕ ಕೃತ್ಯಗಳಲ್ಲಿ ಭಾಗಿಯಾದವರಿಗೆ ಸರ್ಕಾರಿ ಉದ್ಯೋಗ, ಗುತ್ತಿಗೆ ಆಧಾರಿತ ಕೆಲಸ, ಒಪ್ಪಂದ, ಮಂಡಳಿ ಮತ್ತು ಆಯೋಗದ ಕೆಲಸ, ಪೆಟ್ರೋಲ್ ಬಂಕ್ ಪರವಾನಿಗೆ, ಗ್ಯಾಸ್ ಏಜೆನ್ಸಿ ಪರವಾನಿಗೆ, ಪಾಸ್ಪೋರ್ಟ್, ಸರ್ಕಾರಿ ಅನುದಾನ, ಬ್ಯಾಂಕ್ ಸಾಲ ಪಡೆಯಲು ಅವಕಾಶವಿರುವುದಿಲ್ಲ ಎಂದು ಹೇಳಲಾಗಿದೆ.
ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಪ್ರತಿಭಟನೆ, ರಸ್ತೆ ತಡೆ ಮೊದಲಾದ ಕೃತ್ಯಗಳಲ್ಲಿ ಭಾಗಿಯಾಗುವ ಮೂಲಕ ಯಾವುದೇ ಅಪರಾಧ ಕೃತ್ಯದಲ್ಲಿ ತೊಡಗಿಕೊಂಡಿದ್ದರೆ, ಪೊಲೀಸರು ಆರೋಪ ಹೊರಿಸಿದ್ದರೆ ಅಂಥವರಿಗೆ ಸರ್ಕಾರಿ ಉದ್ಯೋಗ ಹಾಗೂ ಇತರೆ ಸೌಲಭ್ಯ ಸಿಗುವುದಿಲ್ಲ ಎಂದು ಹೇಳಲಾಗಿದೆ.
ಉತ್ತರಾಖಂಡದಲ್ಲಿ ಕೂಡ ಇದೇ ರೀತಿಯ ಸುತ್ತೋಲೆ ಹೊರಡಿಸಿದ್ದು ರಾಷ್ಟ್ರವಿರೋಧಿ ಪೋಸ್ಟ್ ಗಳನ್ನು ಹಾಕುವವರ ವಿರುದ್ಧ ಪೊಲೀಸರು ನಿಗಾ ವಹಿಸಲಿದ್ದಾರೆ. ಅಂತಹ ಪೋಸ್ಟ್ ಗಳನ್ನು ಹಾಕುವವರಿಗೆ ಪಾಸ್ಪೋರ್ಟ್ ಪರಿಶೀಲನೆ ವೇಳೆ ಪರಿಣಾಮ ಬೀರಬಹುದು ಎಂದು ಉತ್ತರಾಖಂಕಂಡ್ ಡಿಜಿಪಿ ಅಶೋಕ್ ಕುಮಾರ್ ತಿಳಿಸಿದ್ದಾರೆ. ಪಾಸ್ ಪೋರ್ಟ್ ಗಾಗಿ ಅರ್ಜಿ ಸಲ್ಲಿಸಿದವರ ಸೋಶಿಯಲ್ ಮೀಡಿಯಾ ಪೋಸ್ಟ್ ಗಳ ದಾಖಲೆಗಳನ್ನು ಕೂಡ ಪರಿಶೀಲನೆ ನಡೆಸಲಾಗುವುದು ಎಂದು ಹೇಳಲಾಗಿದೆ.