ಬೆಂಗಳೂರು: 2013ರಲ್ಲಿ ಬೆಂಗಳೂರಿನ ಕಾರ್ಪೊರೇಷನ್ ಸರ್ಕಲ್ ಎಟಿಎಂ ನಲ್ಲಿ ಮಹಿಳೆ ಮೇಲೆ ಹಲ್ಲೆ ನಡೆಸಿದ್ದ ಅಪರಾಧಿ ಮಧುಕರ್ ರೆಡ್ಡಿಗೆ 12 ವರ್ಷ ಜೈಲು ಶಿಕ್ಷೆ ವಿಧಿಸಿ ಕೋರ್ಟ್ ತೀರ್ಪು ನೀಡಿದೆ.
ಬೆಂಗಳೂರಿನ 65ನೇ ಸಿಸಿಹೆಚ್ ಕೋರ್ಟ್ ನ ನ್ಯಾಯಾಧೀಶರಾದ ರಾಜೇಶ್ವರ ಪೀಠ ತೀರ್ಪು ಪ್ರಕಟಿಸಿದೆ. ನಾಲ್ಕು ವರ್ಷಗಳ ಕಾಲ ಸುದೀರ್ಘ ವಾದ ಆಲಿಸಿದ ನ್ಯಾಯಾಲಯ ನಿನ್ನೆ ಮಧುಕರ್ ರೆಡ್ಡಿ ಅಪರಾಧಿ ಎಂದು ಹೇಳಿ ತೀರ್ಪನ್ನು ಇಂದಿಗೆ ಕಾಯ್ದಿರಿಸಿತ್ತು.
ಬ್ಯಾಂಕ್ ಮ್ಯಾನೇಜರ್ ಆಗಿದ್ದ ಜ್ಯೋತಿ ಉದಯ್, 2013ರ ನವೆಂಬರ್ 19ರಂದು ಬೆಳಿಗ್ಗೆ 7:10ಕ್ಕೆ ಹಣ ಡ್ರಾ ಮಾಡಲೆಂದು ಕಾರ್ಪೊರೇಷನ್ ಸರ್ಕಲ್ ನಲ್ಲಿರುವ ಎಟಿಎಂಗೆ ಹೋಗಿದ್ದರು. ಈ ವೇಳೆ ಎಟಿಎಂ ನೊಳಗೆ ನುಗ್ಗಿದ್ದ ಮಧುಕರ್ ರೆಡ್ದಿ ಶಟರ್ ಕ್ಲೋಸ್ ಮಾಡಿ ಮಚ್ಚಿನಿಂದ ಹಲ್ಲೆ ನಡೆಸಿ ಹಣ ಕಸಿದುಕೊಂಡು ಪರಾರಿಯಾಗಿದ್ದ. 2017ರಲ್ಲಿ ಆರೋಪಿಯನ್ನು ಮದನಪಲ್ಲಿ ಪೊಲೀಸರು ಬಂಧಿಸಿದ್ದರು.
ಬರೋಬ್ಬರಿ 4 ವರ್ಷಗಳ ಸುದೀರ್ಘ ವಿಚಾರಣೆ ಬಳಿಕ ನ್ಯಾಯಾಲಯ ಇದೀಗ ಅಪರಾಧಿ ಮಧುಕರ್ ರೆಡ್ದಿಗೆ ದರೋಡೆ ಆರೋಪದಡಿ 10 ವರ್ಷ ಜೈಲು ಶಿಕ್ಷೆ ಹಾಗೂ ಸಾಕ್ಷ್ಯ ನಾಶ ಮಾಡಿದ್ದಕ್ಕೆ 2 ವರ್ಷ ಶಿಕ್ಷೆ ಸೇರಿ 12 ವರ್ಷ ಜೈಲು ಶಿಕ್ಷೆ ವಿಧಿಸಿದೆ.