ಜೋಡಿ ಯಾವುದೇ ಆಗಿರಲಿ. ಮದುವೆ ಅನ್ನೋದು ಪ್ರತಿಯೊಬ್ಬರ ಬಾಳಲ್ಲೂ ಅಮೋಘವಾದ ದಿನ. ಮದುವೆ ಅಂದ್ಮೇಲೆ ಕಲ್ಯಾಣ ಮಂಟಪವನ್ನ ಸಿಂಗಾರ ಮಾಡುವ ಮೂಲಕ ಇಡೀ ಸಮಾರಂಭವನ್ನ ಚಂದಗಾಣಿಸಲಾಗುತ್ತೆ. ಆದರೆ ಇಲ್ಲೊಂದು ಜೋಡಿ ಮಾತ್ರ ಕಲ್ಯಾಣ ಮಂಟಪ, ಛತ್ರ ಯಾವುದೂ ಬೇಡ ಅಂತಾ ಬರೋಬ್ಬರಿ 60 ಅಡಿ ಆಳದ ನೀರಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ.
ವಿ. ಚಿನ್ನದುರೈ ಹಾಗೂ ಎಸ್. ಶ್ವೇತಾ ಇವರಿಬ್ಬರು ಫೆಬ್ರವರಿ 1ರಂದು ನೀಲಂಕರೈ ಕಡಲ ತೀರದಲ್ಲಿ ವಿಶೇಷವಾಗಿ ಮದುವೆಯಾಗಿದ್ದಾರೆ.
ನೀರಿನ ಒಳಗೆ ಹಿಂದೂ ಸಂಪ್ರದಾಯದಂತೆ ಈ ಜೋಡಿ ಮದುವೆಯಾಗಿದೆ. ನಾವು ಮುಹೂರ್ತದ ಸಮಯಕ್ಕೆ ಸರಿಹೊಂದುವಂತೆ ನೀರಿನೊಳಕ್ಕೆ ಇಳಿದೆವು. ಅಲ್ಲಿ ಮಾಲೆಯನ್ನ ಪರಸ್ಪರ ಬದಲಾಯಿಸಿಕೊಂಡು ಬೆಳಗಿನ ಜಾವ 7.30ಕ್ಕೆ ಸರಿಯಾಗಿ ತಾಳಿಯನ್ನ ಕಟ್ಟಿದೆ ಎಂದು ವರ ಚಿನ್ನದುರೈ ಹೇಳಿದ್ದಾರೆ. ಚಿನ್ನದುರೈ ವೃತ್ತಿಯಲ್ಲಿ ಟೆಕ್ಕಿಯಾಗಿದ್ದು, ಸ್ಕೂಬಾ ಡೈವಿಂಗ್ ಪರವಾನಗಿ ಪಡೆದಿದ್ದಾರೆ.
ಶ್ವೇತಾ ಕೂಡ ಟೆಕ್ಕಿಯಾಗಿದ್ದು ಮದುವೆಗಾಗಿ ಕೆಲ ತಿಂಗಳಿನಿಂದ ಸ್ಕೂಬಾ ಡೈವಿಂಗ್ ತರಬೇತಿಯನ್ನ ಪಡೆಯುತ್ತಿದ್ದಾರೆ. ನನಗೆ ಹಾಗೂ ನನ್ನ ಪೋಷಕರಿಗೆ ತುಂಬಾನೇ ಭಯ ಇತ್ತು. ನಮ್ಮ ಜೊತೆ ಇನ್ನೂ 8 ಮಂದಿ ಸ್ಕೂಬಾ ಡೈವರ್ಸ್ ಸ್ಥಳದಲ್ಲಿ ಹಾಜರಿದ್ದರು. ನಾವು ಇದಕ್ಕಾಗಿ ಕಳೆದ ವಾರ ಪ್ರ್ಯಾಕ್ಟೀಸ್ ಕೂಡ ಮಾಡಿದ್ದೆವು ಎಂದು ಶ್ವೇತಾ ಹೇಳಿದ್ದಾರೆ.