ಬೆಂಗಳೂರು: ತಮ್ಮನ್ನು ಸರ್ಕಾರಿ ನೌಕರರನ್ನಾಗಿ ಪರಿಗಣನೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಇತ್ತೀಚೆಗಷ್ಟೇ ಮುಷ್ಕರ ನಡೆಸಿದ್ದ ಸಾರಿಗೆ ಸಿಬ್ಬಂದಿ ಇದೀಗ ಮತ್ತೆ ಹೋರಾಟಕ್ಕೆ ಸಜ್ಜಾಗಿದ್ದಾರೆ.
ಸಾರಿಗೆ ಇಲಾಖೆ ಸಿಬ್ಬಂದಿಗಳ ಬೇಡಿಕೆಯನ್ನು ಸರ್ಕಾರ ಈಡೇರಿಸದ ಹಿನ್ನೆಲೆಯಲ್ಲಿ ಮತ್ತೆ ಬಸ್ ಮುಷ್ಕರ ನಡೆಸಲು ಯೋಜನೆ ರೂಪಿಸಲಾಗಿದ್ದು, ಕೊಟ್ಟ ಭರವಸೆಯನ್ನು ಸರ್ಕಾರ ಈಡೇರಿಸದೇ ಇದ್ದಲ್ಲಿ ಹೋರಾಟ ನಡೆಸುವುದಾಗಿ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.
ಗಗನಮುಖಿಯಾದ ತೈಲ ಬೆಲೆ – ಕೇಂದ್ರ ಸರ್ಕಾರದ ವಿರುದ್ಧವೇ ಚಾಟಿ ಬೀಸಿದ ಬಿಜೆಪಿ ಸಂಸದ
ಸುದ್ದಿಗಾರರೊಂದಿಗೆ ಮಾತನಾಡಿದ ಕೋಡಿಹಳ್ಳಿ, ಮೂರು ತಿಂಗಳಲ್ಲಿ ಸಾರಿಗೆ ಸಿಬ್ಬಂದಿಗಳ ಬೇಡಿಕೆ ಈಡೇರಿಸುವುದಾಗಿ ಸರ್ಕಾರ ಹೇಳಿತ್ತು. ಆದರೆ ಈವರೆಗೂ ಈ ಬಗ್ಗೆ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಸಿಬ್ಬಂದಿಗಳ ಸಂಬಳ ಪಾವತಿಯನ್ನು ಬಾಕಿ ಉಳಿಸಿಕೊಂಡಿದೆ. ಈ ತಿಂಗಳಾಂತ್ಯದ ಒಳಗೆ ಸರ್ಕಾರ ಬೇಡಿಕೆ ಈಡೇರಿಸದಿದ್ದರೆ ರಾಜ್ಯಾದ್ಯಂತ ಬಸ್ ಸಂಚಾರ ಬಂದ್ ಮಾಡಿ ಮತ್ತೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.