ಬೆಂಗಳೂರು: ಸರ್ವರ್ ಸಮಸ್ಯೆಯಿಂದಾಗಿ ಸೋಮವಾರ ರಾಜ್ಯದೆಲ್ಲೆಡೆ ಆಸ್ತಿ ನೋಂದಣಿ ಪ್ರಕ್ರಿಯೆ ಸ್ಥಗಿತವಾಗಿದೆ. ತಾಂತ್ರಿಕ ಕಾರಣದಿಂದ ಸಮಸ್ಯೆ ಉಂಟಾಗಿದ್ದು ಇದರ ಪರಿಣಾಮ ರಾಜ್ಯದ 282 ಉಪನೊಂದಣಾಧಿಕಾರಿ ಕಚೇರಿಗಳಲ್ಲಿ ಆಸ್ತಿ ನೋಂದಣಿಗೆ ಬಂದವರು ಕಾಯುವಂತಾಗಿದೆ.
ಆಸ್ತಿ ನೋಂದಣಿ ಮತ್ತು ಖರೀದಿದಾರರು ಕಾಯುವುದನ್ನು ತಪ್ಪಿಸಲು ಮೊದಲೇ ದಿನಾಂಕ ನಿಗದಿಪಡಿಸಿ ನೋಂದಣಿ ಮಾಡಿಸಿಕೊಳ್ಳಲು ಅವಕಾಶ ನೀಡಲಾಗುತ್ತದೆ. ಅದೇ ರೀತಿ ಸೋಮವಾರ ಆಸ್ತಿ ನೋಂದಣಿಗೆ ಬಂದವರು ಕಾದು ಕಾದು ಸಾಕಾಗಿ ಅಧಿಕಾರಿಗೆ ಶಾಪ ಹಾಕಿ ವಾಪಸ್ ತೆರಳಿದ್ದಾರೆ.
ಉಪನೊಂದಣಾಧಿಕಾರಿ ಕಚೇರಿಗಳಲ್ಲಿ ಆನ್ಲೈನ್ ವ್ಯವಸ್ಥೆ ಮೂಲಕ ಆಸ್ತಿ ನೋಂದಣಿ ಮಾಡಲಾಗುತ್ತದೆ. ತಾಂತ್ರಿಕ ಸಮಸ್ಯೆ ಎದುರಾಗಿದ್ದ ಕಾರಣ ಸೋಮವಾರ ಆಸ್ತಿ ನೋಂದಣಿ ಪ್ರಕ್ರಿಯೆ ಸ್ಥಗಿತಗೊಂಡಿದೆ. ರಾಜ್ಯ ಸರ್ಕಾರಕ್ಕೆ ಹೆಚ್ಚಿನ ಆದಾಯ ತಂದುಕೊಡುವ ಇಲಾಖೆಯನ್ನು ತಾಂತ್ರಿಕವಾಗಿ ಅಭಿವೃದ್ಧಿಪಡಿಸುವ ಬದಲು ಬೇಜವಾಬ್ದಾರಿ ತೋರಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತವಾಗಿದೆ.
ಆಸ್ತಿ ಮಾರಾಟ ಮತ್ತು ನೋಂದಣಿಗೆ ಕುಟುಂಬ ಸಮೇತ ಆಗಮಿಸಿ ಸಬ್ ರಿಜಿಸ್ಟ್ರಾರ್ ಕಚೇರಿಗೆ ಬಂದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಾಂತ್ರಿಕ ತಂಡದಿಂದ ಸಮಸ್ಯೆ ಸರಿಪಡಿಸಲಾಗುತ್ತಿದ್ದು, ಸಮಸ್ಯೆ ಶೀಘ್ರವೇ ಸರಿಯಾಗುತ್ತದೆ ಎಂದು ಹೇಳಲಾಗಿದೆ.