ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ರೈತರಿಗೆ ಬೆಳೆ ನಷ್ಟ ಪರಿಹಾರ ಘೋಷಿಸಿದ್ದಾರೆ. 11.43 ಲಕ್ಷ ರೈತರಿಗೆ ತಮಿಳುನಾಡು ಸರ್ಕಾರ 1,116.97 ಕೋಟಿ ರೂಪಾಯಿ ಪರಿಹಾರ ಮೊತ್ತ ಬಿಡುಗಡೆ ಮಾಡಿದ್ದು, ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುವುದು.
ಕಳೆದ ಎರಡು ತಿಂಗಳ ಹಿಂದೆ ಭಾರಿ ಮಳೆಯಿಂದ ತಮಿಳುನಾಡಿನಲ್ಲಿ 6,62,689 ಹೆಕ್ಟೇರ್ ಕೃಷಿ ಬೆಳೆ, 18,645 ಹೆಕ್ಟೇರ್ ತೋಟಗಾರಿಕಾ ಬೆಳೆಗಳಿಗೆ ಹಾನಿಯಾಗಿದೆ. ನಿವಾರ್ ಮತ್ತು ಬುರೇವಿ ಚಂಡಮಾರುತ ಹಾನಿಯಿಂದ ಬೆಳೆ ನಷ್ಟಕ್ಕೆ ಒಳಗಾಗಿದ್ದ ರೈತರಿಗೆ ಪರಿಹಾರ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಮಳೆಯಾಶ್ರಿತ ಮತ್ತು ನೀರಾವರಿ ಭತ್ತ ಬೆಳೆಗಾರರಿಗೆ ಪ್ರತಿ ಹೆಕ್ಟೇರ್ ಗೆ 20 ಸಾವಿರ ರೂ., ಮಳೆಯಾಶ್ರಿತ ಬೆಳೆಗಳಿಗೆ ಹೆಕ್ಟೇರ್ ಗೆ 10 ಸಾವಿರ ರೂ., ದೀರ್ಘಕಾಲಿಕ ಬೆಳೆಗಳಿಗೆ ಹೆಕ್ಟೇರ್ ಗೆ 25 ಸಾವಿರ ರೂಪಾಯಿ ಪರಿಹಾರ ನೀಡಲಾಗುವುದು. ಫೆಬ್ರವರಿ 3 ರಿಂದ 5 ರವರೆಗೆ ತಮಿಳುನಾಡಿಗೆ ಕೇಂದ್ರ ಅಧ್ಯಯನ ತಂಡ ಭೇಟಿ ನೀಡಿ ರೈತರ ಬೆಳೆ ನಷ್ಟದ ಬಗ್ಗೆ ಪರಿಶೀಲನೆ ನಡೆಸಲಿದೆ ಎಂದು ಹೇಳಲಾಗಿದೆ.