ಬೆಂಗಳೂರು: ಪತ್ನಿಯ ಪೋರ್ಜರಿ ಸಹಿ ಮಾಡಿ ಹಲವು ಬ್ಯಾಂಕುಗಳಿಂದ ಸಾಲ ಪಡೆದುಕೊಂಡಿದ್ದ ಪತಿ ವಿರುದ್ಧ ದೂರು ನೀಡಲಾಗಿದೆ.
ಬೆಂಗಳೂರಿನ ಶಂಕರಪುರ ಪೊಲೀಸ್ ಠಾಣೆಗೆ ಪ್ರತಿಷ್ಠಿತ ಖಾಸಗಿ ಕಂಪನಿ ಉದ್ಯೋಗಿಯಾಗಿರುವ 41 ವರ್ಷದ ಮಹಿಳೆ ದೂರು ನೀಡಿದ್ದಾರೆ. ಪತ್ನಿಯ ಪೋರ್ಜರಿ ಸಹಿ ಮಾಡಿ ಪತಿ ರಾಜೀವ್ ಬನ್ಸಾಲಿ ವಿವಿಧ ಬ್ಯಾಂಕುಗಳಿಂದ ಸಾಲ ಪಡೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.
ದಂಪತಿಗೆ 2000 ರಲ್ಲಿ ಮದುವೆಯಾಗಿದ್ದು, ಆರಂಭದಲ್ಲಿ ಅನ್ಯೋನ್ಯವಾಗಿದ್ದರು. ಕೆಲಸಕ್ಕೆ ಹೋಗದೆ ಮದ್ಯಪಾನ ಮಾಡಿ ಮನೆಗೆ ಬರುತ್ತಿದ್ದ ರಾಜೀವ್ ಬನ್ಸಾಲಿ ಬ್ಯುಸಿನೆಸ್ ಮಾಡಲು 4 ಲಕ್ಷ ರೂಪಾಯಿ ಸಾಲ ಕೊಡಿಸುವಂತೆ ಪತ್ನಿಗೆ ಕೇಳಿಕೊಂಡಿದ್ದ. ತಾನೇ ಸಾಲದ ಕಂತು ಕಟ್ಟುವುದಾಗಿ ಹೇಳಿದ್ದನಾದರೂ ಆತ ಸಾಲ ತೀರಿಸಿದ ಕಾರಣ ಪತ್ನಿಯೇ ಸಾಲ ತೀರಿಸಿದ್ದಾರೆ.
ಮತ್ತೆ ಸಾಲ ಕೊಡಿಸುವಂತೆ ಪತ್ನಿಗೆ ಕಾಡಲು ಆರಂಭಿಸಿದ್ದದರಿಂದ ಇಬ್ಬರ ನಡುವೆ ಜಗಳವಾಗಿ ಡೈವೋರ್ಸ್ ಪಡೆಯಲು ತೀರ್ಮಾನಿಸಿ ಪ್ರತ್ಯೇಕವಾಗಿ ವಾಸವಾಗಿದ್ದಾರೆ. 2017 ರಲ್ಲಿ ಪತ್ನಿ ಹೆಸರಲ್ಲಿದ್ದ ಮನೆಯ ಮೇಲೆ ರಾಜೀವ್ 5 ಲಕ್ಷ ರೂ. ಸಾಲ ಪಡೆದುಕೊಂಡಿದ್ದಾನೆ. ಇದಕ್ಕಾಗಿ ಆಕೆಯ ನಕಲಿ ಸಹಿ ಮಾಡಿದ್ದಾನೆ. ಸಾಲದ ಕಂತು ಪಾವತಿಸದ ಕಾರಣ ಫೈನಾನ್ಸ್ ಕಂಪನಿಯವರು ಪತ್ನಿಗೆ ನೋಟಿಸ್ ನೀಡಿದ್ದು, ಯಾವುದೇ ಸಾಲ ಪಡೆಯದಿದ್ದರೂ ನೋಟಿಸ್ ಕಳುಹಿಸಿದ್ದ ಬಗ್ಗೆ ಅನುಮಾನಗೊಂಡ ಮಹಿಳೆ ದಾಖಲೆ ನೀಡುವಂತೆ ಫೈನಾನ್ಸ್ ಕಂಪನಿಯವರ ಬಳಿ ಕೇಳಿಕೊಂಡಿದ್ದಾರೆ. ದಾಖಲೆಯಲ್ಲಿ ತನ್ನ ಸಹಿ ನಕಲಿ ಮಾಡಿ ಸಾಲ ಪಡೆದಿರುವುದು ಗೊತ್ತಾಗಿ ದೂರು ನೀಡಲಾಗಿದೆ.
ರಾಜೀವ್ ಅನೇಕ ಬ್ಯಾಂಕುಗಳಲ್ಲಿ ಪತ್ನಿಯ ಸಹಿ ಫೋರ್ಜರಿ ಮಾಡಿ ಆಕೆಯ ಹೆಸರಲ್ಲಿ ಲಕ್ಷಾಂತರ ರೂಪಾಯಿ ಸಾಲ ಮಾಡಿರುವುದು ಗೊತ್ತಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.