ಹೌರಾ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ರಣಕಹಳೆ ಮೊಳಗಿಸಿರುವ ಕೇಂದ್ರ ಗೃಹಸಚಿವ ಅಮಿತ್ ಶಾ ಹೌರಾದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಟಿಎಂಸಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಹೌರಾದಲ್ಲಿ ನಡೆದ ಸಮಾವೇಶದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಅಮಿತ್ ಶಾ, ಕಳೆದ ಹತ್ತು ವರ್ಷದ ಅವಧಿಯಲ್ಲಿ ಪಶ್ಚಿಮಬಂಗಾಳ ಮುಖ್ಯಮಂತ್ರಿ ನೀಡಿದ್ದ ಬದಲಾವಣೆಯ ಭರವಸೆ ಹುಸಿಯಾಗಿದೆ. ಪಶ್ಚಿಮ ಬಂಗಾಳವನ್ನು ಪ್ರತಿ ಕ್ಷೇತ್ರದಲ್ಲಿಯೂ ಹಿಂದಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಅವರನ್ನು ಪಶ್ಚಿಮಬಂಗಾಳ ಕ್ಷಮಿಸುವುದಿಲ್ಲ ಎಂದು ಹೇಳಿದ್ದಾರೆ.
ತೃಣಮೂಲ ಕಾಂಗ್ರೆಸ್ ಪಕ್ಷದ ನಾಲ್ವರು ನಾಯಕರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಸಮಾವೇಶದಲ್ಲಿದ್ದ ಕೇಂದ್ರ ಸಚಿವ ಸ್ಮೃತಿ ಇರಾನಿ ಸಮ್ಮುಖದಲ್ಲಿ ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳಲಾಗಿದೆ.
ಟಿಎಂಸಿ ಸೇರಿದಂತೆ ಬೇರೆ ಪಕ್ಷಗಳ ನಾಯಕರು ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದು, ಚುನಾವಣೆಯ ವೇಳೆಗೆ ಮಮತಾ ಬ್ಯಾನರ್ಜಿ ಏಕಾಂಗಿಯಾಗಲಿದ್ದಾರೆ. ಏಕೆಂದರೆ ಅವರು ರಾಜ್ಯದ ಜನರಿಗೆ ಅನ್ಯಾಯ ಮಾಡಿದ್ದಾರೆ ಎಂದು ಅಮಿತ್ ಶಾ ವಾಗ್ದಾಳಿ ನಡೆಸಿದ್ದಾರೆ.
ಇದೇ ವೇಳೆ ಮಾತನಾಡಿದ ಸೃತಿ ಇರಾನಿ, ಜೈ ಶ್ರೀರಾಮ್ ಘೋಷಣೆಯನ್ನು ನೀವು ನಿರಾಕರಿಸಬಹುದು. ಆದರೆ ರಾಮ ಮಂದಿರ ನಿರ್ಮಾಣವಾಗುತ್ತಿದೆ. ಬಂಗಾಳ ರಾಮ ರಾಜ್ಯವಾಗಲು ಇಲ್ಲಿನ ಜನ ಬಾಗಿಲು ಬಡಿಯುತ್ತಿದ್ದಾರೆ. ಜೈ ಶ್ರೀರಾಮ್ ಘೋಷಣೆ ಅವಮಾನಿಸುವ ಪಕ್ಷದಲ್ಲಿ ಯಾವುದೇ ದೇಶಭಕ್ತರು ಇರುವುದಿಲ್ಲ ಎಂದು ಹೇಳಿದ್ದಾರೆ.