ಬೆಂಗಳೂರು: ಮಾಲಿನ್ಯ ನಿಯಂತ್ರಣಕ್ಕಾಗಿ ಮುಂದಿನ ದಿನಗಳಲ್ಲಿ ಇನ್ನಷ್ಟು ಎಲೆಕ್ಷ್ರಿಕ್ ವಾಹನಗಳಿಗೆ ಉತ್ತೇಜನ ನೀಡಲಾಗುತ್ತಿದ್ದು, ರಾಜ್ಯದಲ್ಲಿ ಎರಡು ಲೀಥಿಯಂ ಬ್ಯಾಟರಿ ಘಟಕಗಳು ಸ್ಥಾಪನೆಯಾಗುತ್ತಿವೆ ಎಂದು ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ.
ವಿಧಾನಸೌಧದ ಬಳಿ ರೋಟರಿ ಕ್ಲಬ್ ಹಮ್ಮಿಕೊಂಡಿದ್ದ ಎಲೆಕ್ಟ್ರಿಕ್ ವಾಹನಗಳ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದ ಡಿಸಿಎಂ, ಲೀಥಿಯಂ ಬ್ಯಾಟರಿಗಳನ್ನು ತಯಾರಿಸುವ ಬೃಹತ್ತಾದ ಎರಡು ಕೈಗಾರಿಕೆಗಳ ಪೈಕಿ ಒಂದು ಹುಬ್ಬಳ್ಳಿ ಭಾಗದಲ್ಲಿ, ಇನ್ನೊಂದು ಚಿಕ್ಕಬಳ್ಳಾಪುರ ಕಡೆ ಸ್ಥಾಪನೆಯಾಗುತ್ತಿವೆ ಎಂದರು.
ಕೊರೊನಾ ಲಸಿಕೆಗಳು ಸಂಪೂರ್ಣ ಸುರಕ್ಷಿತ; ಜನರಲ್ಲಿ ಹಿಂಜರಿಕೆ ಬೇಡ ಎಂದ ಸಚಿವ ಡಾ.ಸುಧಾಕರ್
2018ರಲ್ಲಿಯೇ ರಾಜ್ಯ, ದೇಶದಲ್ಲೇ ಮೊದಲಿಗೆ ಎಲೆಕ್ಟ್ರಿಕ್ ವಾಹನಗಳ ನೀತಿಯನ್ನು ಜಾರಿಗೆ ತಂದಿದೆ. ಚಾರ್ಚಿಂಗ್ ಸ್ಟೇಷನ್ ಗಳಲ್ಲಿ ಗ್ರಾಹಕರಿಗೆ ರಿಯಾಯಿತಿ ನೀಡಲಾಗುತ್ತಿದ್ದು, ವಾಣಿಜ್ಯ ಬಳಕೆಯ ವಿದ್ಯುತ್ ನ ಪ್ರತಿ ಯೂನಿಟ್ ಗೆ 9 ರೂ. ಇದ್ದರೆ, ಎಲೆಕ್ಟ್ರಿಕ್ ವಾಹನಗಳಿಗೆ 5 ರೂ.ದರದಲ್ಲಿ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನ ತಯಾರಕರು ವಾಹನವನ್ನು ಮಾತ್ರ ನೀಡಲಿದ್ದು, ಗ್ರಾಹಕರು ಬ್ಯಾಟರಿಯನ್ನು ಬಾಡಿಗೆಗೆ ಪಡೆದುಕೊಂಡು ವಾಹನ ಚಾಲನೆ ಮಾಡಬಹುದು. ರಸ್ತೆಗಳ ಉದ್ದಗಲಕ್ಕೂ ʼಬ್ಯಾಟರಿ ಬ್ಯಾಂಕ್ʼ ಗಳು ಕೂಡ ಸ್ಥಾಪನೆಯಾಗಲಿದ್ದು, ಅವು ಕೂಡ ಪೆಟ್ರೋಲ್ ಬಂಕ್ ಗಳಂತೆ ಕಾರ್ಯನಿರ್ವಹಿಸಲಿವೆ ಎಂದು ತಿಳಿಸಿದ್ದಾರೆ.
ಈಗಾಗಲೇ ಬೆಸ್ಕಾಂ ವತಿಯಿಂದ 150 ಚಾರ್ಜಿಂಗ್ ಸ್ಟೇಷನ್ ಗಳನ್ನು ಮಾಡಲಾಗಿದೆ. ಇನ್ನೂ 150 ಚಾರ್ಜಿಂಗ್ ಸ್ಟೇಷನ್ ಗಳನ್ನು ಸ್ಥಾಪಿಸಲು ಎನ್ಟಿಪಿಸಿ ಜತೆ ಕೈಜೋಡಿಸಲಾಗಿದೆ ಎಂದು ಡಾ.ಅಶ್ವತ್ಥನಾರಾಯಣ ತಿಳಿಸಿದ್ದಾರೆ.