ಬೆಂಗಳೂರು: ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಹೇಳಿಕೆ ಖಂಡಿಸಿ ಕನ್ನಡ ಚಳುವಳಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳು ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ ಬಳಿ ಬೃಹತ್ ಪ್ರತಿಭಟನೆ ನಡೆಸಿದ್ದು, ರೈಲ್ವೆ ಚಳುವಳಿ ಆರಂಭಿಸಿದ್ದಾರೆ.
ಮಹಾರಾಷ್ಟ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದ ಪ್ರತಿಭಟನಾಕಾರರು, ಬೆಳಗಾವಿ ನಮ್ಮದು, ರಾಜ್ಯದ ಒಂದಿಂಚು ಜಾಗವನ್ನೂ ಬಿಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.
ಬಿಜೆಪಿ ನಾಯಕರ ಭೇಟಿ ಬೆನ್ನಲ್ಲೇ ನಿರ್ಧಾರ ಬದಲಿಸಿದ ಅಣ್ಣಾ ಹಜಾರೆ
ಈ ವೇಳೆ ಮಾತನಾಡಿದ ವಾಟಾಳ್ ನಾಗರಾಜ್, ಎಂಇಎಸ್ ನಿಷೇಧ ಮಾಡಬೇಕು. ಕರ್ನಾಟಕದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ ಯಾಕೆ ಬೇಕು? ಗಡಿ ವಿಚಾರವಾಗಿ ಮಹಾ ಸಿಎಂ ಉದ್ಧವ್ ಠಾಕ್ರೆ ಪದೇ ಪದೇ ಕ್ಯಾತೆ ತೆಗೆಯುತ್ತಿದ್ದರೂ ಸಿಎಂ ಯಡಿಯೂರಪ್ಪ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ಅವರ ಹೇಳಿಕೆಯನ್ನು ವಿರೋಧಿಸುತ್ತಿಲ್ಲ. ಹಾಗಾಗಿ ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು.
ಬೆಳಗಾವಿ ನಮ್ಮದು. ಫೆಬ್ರವರಿ 21ರಂದು ನಾವು ಬೆಳಗಾವಿಗೆ ಹೋಗುತ್ತೇವೆ. ಮಹಾರಾಷ್ಟ್ರ ಗಡಿಗೆ 1 ಲಕ್ಷ ಮಂದಿ ನುಗ್ಗುತ್ತೇವೆ. ಶಿವಸೇನೆಯವರು ಕರ್ನಾಟಕಕ್ಕೆ ಹೇಗೆ ನುಗ್ಗಿದರೋ ಹಾಗೇ ನಾವು ಕೂಡ ಮಹಾರಾಷ್ಟ್ರ ಗಡಿಗೆ ನುಗ್ಗಿ, ಮರಾಠಿ ನಾಮಫಲಕಗಳನ್ನು ಕಿತ್ತು ಬಿಸಾಕುತ್ತೇವೆ. ಈ ಮೂಲಕ ಉದ್ಧವ್ ಠಾಕ್ರೆಗೆ ನಾವು ಖಡಕ್ ಸಂದೇಶ ರವಾನಿಸಲಿದ್ದೇವೆ ಎಂದು ಹೇಳಿದರು.