ಬೆಂಗಳೂರು: ಕೋವಿಡ್ ಸಂಕ್ರಮಣ ಕಾಲಘಟ್ಟದಲ್ಲಿ ರಾಜ್ಯದಲ್ಲಿ ಬಹುಚರ್ಚಿತ ವಿಷಯವಾಗಿದ್ದ ಶಾಲಾ ಶುಲ್ಕ ನಿಗದಿಗೆ ಸರ್ಕಾರ ತೆರೆ ಎಳೆದಿದ್ದು, ಕಳೆದ ವರ್ಷದ ಕೇವಲ ಆಯಾ ಶಾಲೆಗಳ ಬೋಧನಾ ಶುಲ್ಕದ ಶೇ. 70 ರಷ್ಟನ್ನು ಮಾತ್ರವೇ ಈ ವರ್ಷದ ಒಟ್ಟು ಶಾಲಾ ಶುಲ್ಕವನ್ನಾಗಿ ಪಡೆಯಬೇಕೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.
ಪತ್ರಿಕಾ ಗೋಷ್ಠಿಯಲ್ಲಿ ಶಾಲಾ ಶುಲ್ಕ ನಿಗದಿ ಕುರಿತ ಸರ್ಕಾರದ ನಿರ್ಧಾರವನ್ನು ಪ್ರಕಟಿಸಿ ಮಾತನಾಡಿದ ಅವರು, ಈ ನಿರ್ಧಾರಕ್ಕೆ ಬರುವ ಮುಂಚೆ ಹಲವಾರು ಸುತ್ತು ಶಾಲಾ ಶಿಕ್ಷಣದ ಪಾಲುದಾರರೆಲ್ಲರೊಂದಿಗೆ ಚರ್ಚಿಸಿ ಕೊನೆಯಲ್ಲಿ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಶುಲ್ಕ ನಿಗದಿ ತೀರ್ಮಾನಕ್ಕೆ ಬರಲಾಗಿದೆ ಎಂದು ತಿಳಿಸಿದರು.
ಈ ಸಾಲಿಗೆ ಮಿತಗೊಂಡಂತೆ ರಾಜ್ಯದಲ್ಲಿರುವ ಯಾವುದೇ ಮಾದರಿಯ ಪಠ್ಯಕ್ರಮವನ್ನು ಬೋಧಿಸುವ ಖಾಸಗಿ ಶಾಲೆಗಳು ಕಳೆದ ಸಾಲಿನ ಅಂದರೆ 2019-20ನೇ ಸಾಲಿನ ಬೋಧನಾ ಶುಲ್ಕದ ಶೇ. 70 ಭಾಗವನ್ನು ಮಾತ್ರ ಪೋಷಕರಿಂದ ಈ ಸಾಲಿನ ಒಟ್ಟು ಶುಲ್ಕವಾಗಿ ಪಡೆಯಬೇಕು. ಈ ಬಾರಿ ಅವಧಿ ಶುಲ್ಕವನ್ನು ಹೊರತುಪಡಿಸಿ ಯಾವುದೇ ಅಭಿವೃದ್ಧಿ ಶುಲ್ಕಗಳನ್ನು ಶಾಲೆಗಳು ಪಡೆಯುವಂತಿಲ್ಲ. ವಿವಿಧ ಟ್ರಸ್ಟ್‍ಗಳಿಗೆ ಯಾವುದೇ ವಂತಿಕೆಯನ್ನು ಪಡೆಯುವಂತಿಲ್ಲ ಎಂದು ತಿಳಿಸಿದರು.
2020-21ನೇ ಶೈಕ್ಷಣಿಕ ಸಾಲಿನಲ್ಲಿ ಈಗಾಗಲೇ ಮೇಲೆ ತಿಳಿಸಿರುವ ಶುಲ್ಕಕ್ಕಿಂತ ಹೆಚ್ಚಿನ ಶುಲ್ಕ ಪಡೆದಿದ್ದಲ್ಲಿ 2021-22ನೇ ಸಾಲಿನಲ್ಲಿ ಪಾವತಿಸಬೇಕಾದ ಶುಲ್ಕಕ್ಕೆ ಹೊಂದಾಣಿಕೆಯನ್ನು ಮಾಡಿಕೊಳ್ಳಬಹುದು. ಯಾವುದೇ ಶಿಕ್ಷಣ ಸಂಸ್ಥೆ ಮೇಲೆ ತಿಳಿಸಿರುವ ಶುಲ್ಕಕ್ಕಿಂತ ಕಡಿಮೆ ಶುಲ್ಕವನ್ನು ವಿಧಿಸಲು ಇಚ್ಛಿಸಿದಲ್ಲಿ, ಅದಕ್ಕೆ ಅವರಿಗೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಲಾಗಿದೆ ಎಂದು ಅವರು ವಿವರಿಸಿದರು.
ಶುಲ್ಕವನ್ನು ಕಂತುಗಳಲ್ಲಿ ಪಾವತಿಸಲು ಸಹ ಪೋಷಕರಿಗೆ ಅವಕಾಶವನ್ನು ಕಲ್ಪಿಸಬೇಕು. ಶುಲ್ಕ ರಿಯಾಯಿತಿ ಕುರಿತಂತೆ ಪೋಷಕರು/ಶಾಲೆಗಳು ಯಾವುದೇ ತಕರಾರು ಹೊಂದಿದ್ದಲ್ಲಿ ಅದನ್ನು ಪರಿಹರಿಸುವ ನಿಟ್ಟಿನಲ್ಲಿ ಅಧಿಕಾರಯುಕ್ತ ಸಮಿತಿ ರಚಿಸಿ ಅದರ ಮೂಲಕ ಇಂತಹ ದೂರು ಪ್ರಕರಣಗಳನ್ನು ನಿರ್ವಹಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಕೊರೋನಾ ಸಾಂಕ್ರಾಮಿಕ ಸೋಂಕು ಪ್ರಸರಣ ಹಿನ್ನೆಲೆಯಲ್ಲಿ ಶಾಲಾ ತರಗತಿಗಳು ಭೌತಿಕವಾಗಿ ಆರಂಭವಾಗದೇ ಇರುವುದರಿಂದ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಹಲವಾರು ತಿಂಗಳುಗಳ ಕಾಲ ಮಕ್ಕಳು ಶಾಲೆಗೆ ಹೋಗದಂತಹ ಸಂದರ್ಭ ಬಂದೊದಗಿತ್ತು. ಕೊರೋನಾ ಹಿನ್ನೆಲೆಯಲ್ಲಿ ಎಲ್ಲ ಸ್ತರದ ಜನರೂ ಸಹ ಒಂದಲ್ಲ ಒಂದು ರೀತಿಯ ಆರ್ಥಿಕ ತೊಂದರೆ ಅನುಭವಿಸುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿದೆ. ಹಾಗೆಯೇ ಖಾಸಗಿ ಶಾಲೆಗಳೂ ಸಹ ಶಾಲಾರಂಭವಾಗದೇ ಇರುವುದರಿಂದ ಶುಲ್ಕ ಪಾವತಿಯಾಗದೇ ತಮ್ಮ ಸಿಬ್ಬಂದಿಗೆ ವೇತನ ಪಾವತಿಗೆ ತೊಂದರೆ ಅನುಭವಿಸುತ್ತಿರುವುದನ್ನೂ ಸರ್ಕಾರ ಗಮನಿಸಿದೆ ಎಂದು ತಿಳಿಸಿದರು.
ಪೋಷಕರು, ಖಾಸಗಿ ಶಾಲಾ ಸಂಸ್ಥೆಗಳ ಸಂಘಟನೆಗಳು ಸೇರಿದಂತೆ ಹಲವರೊಂದಿಗೆ ಹಲವಾರು ಸುತ್ತಿನ ಚರ್ಚೆಗಳು, ಸಮಾಲೋಚನೆಗಳನ್ನು ನಡೆಸಲಾಗಿದೆ ಎಂದ ಸುರೇಶ್ ಕುಮಾರ್, 07-08-2020ರಂದು ಶುಲ್ಕ ನಿಗದಿ ಕುರಿತಂತೆ ವಿಧಾನಪರಿಷತ್ತಿನ ಮಾನ್ಯ ಪದವೀಧರ ಮತ್ತು ಶಿಕ್ಷಕ ಕ್ಷೇತ್ರದ ಸದಸ್ಯರೊಂದಿಗೆ ಚರ್ಚೆ ನಡೆಸಲಾಗಿದೆ. 27-11-2020ರಂದು ಖಾಸಗಿ ಆಡಳಿತ ಮಂಡಳಿಗಳ ವಿವಿಧ ಸಂಘಟನೆಗಳೊಂದಿಗೆ ಸಭೆ ನಡೆಸಲಾಗಿದೆ. 14-12-2020, 20-12-2020, 24-12-2020 ರಂದು ಖಾಸಗಿ ಶಾಲಾ ಆಡಳಿತ ಮಂಡಳಿಗಳು, ಎಫ್‍ಕೆಸಿಸಿಐ ಪ್ರತಿನಿಧಿಗಳು, ಪೋಷಕರ ಪ್ರತಿನಿಧಿಗಳೊಂದಿಗೆ ಶುಲ್ಕ ನಿಗದಿ ಕುರಿತು ಸಭೆಗಳು ನಡೆದಿವೆ. ದಿನಾಂಕ 15-01-2021ರಂದು ಖಾಸಗಿ ಅನುದಾನ ರಹಿತ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ ಮತ್ತು ಪೋಷಕರ ಸಂಘಟನೆಗಳ ಒಕ್ಕೂಟದ ಪ್ರತಿನಿಧಿಗಳೊಂದಿಗೆ ಸಭೆ ನಡೆಸಲಾಗಿದೆ ಎಂದು ವಿವರಿಸಿದರು.
ಮುಖ್ಯಮಂತ್ರಿಗಳೊಂದಿಗೂ ಸಮಾಲೋಚನೆ:
ಈ ಸಭೆಗಳೂ ಅಲ್ಲದೇ ಈ ಮಧ್ಯೆ ಹಲವಾರು ಬಾರಿ ಬೆಂಗಳೂರಿನ ಅನುದಾನ ರಹಿತ ವಿವಿಧ ಶಾಲಾ ಕಾಲೇಜುಗಳ ಆಡಳಿತ ಮಂಡಳಿಗಳು, ಮೈಸೂರು ಭಾಗದ ಶಾಲಾ ಕಾಲೇಜುಗಳ ಆಡಳಿತ ಮಂಡಳಿಗಳ ಪ್ರತಿನಿಧಿಗಳು, ದಕ್ಷಿಣ ಕನ್ನಡ ಭಾಗದ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು, ಸೇರಿದಂತೆ ರಾಜ್ಯದ ವಿವಿಧ ಭಾಗದ ಶಾಲಾಡಳಿತ ಮಂಡಳಿಗಳು, ಪೋಷಕರ ಸಂಘಟನೆಗಳ ಪ್ರತಿನಿಧಿಗಳು, ಸೇರಿದಂತೆ ರಾಜ್ಯದ ವಿವಿಧ ಭಾಗಗಳ ಪೋಷಕರ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಲಾಗಿದೆ. ಕ್ಯಾಮ್, ರುಪ್ಸಾ, ಕುಸ್ಮಾ, ವಿವಿಧ ಸಿಬಿಎಸ್‍ಇ/ ಐಸಿಎಸ್‍ಇ ಶಾಲಾ ಸಂಘಟನೆಗಳು ಸೇರಿದಂತೆ ಹಲವಾರು ಶಾಲೆಗಳ ಆಡಳಿತ ಮಂಡಳಿಗಳ ಪ್ರತಿನಿಧಿಗಳೊಂದಿಗೂ ಹಲವಾರು ಬಾರಿ ಸಭೆ ನಡೆಸಲಾಗಿದೆ. ಈ ಎಲ್ಲ ಹತ್ತು ಹಲವು ಸಭೆಗಳ/ ಸಂವಾದಗಳ ತರುವಾಯ ಅಂತಿಮವಾಗಿ ಈ ಕುರಿತಂತೆ ಪ್ರಧಾನ ಕಾರ್ಯದರ್ಶಿಗಳು, ಆಯುಕ್ತರೊಂದಿಗೆ ಕೂಲಂಕಶವಾಗಿ ಚರ್ಚಿಸಿದ ನಂತರ, ದಿನಾಂಕ 28.01.2021 ರಂದು ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಸಹ ಸಮಾಲೋಚಿಸಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಸುರೇಶ್ ಕುಮಾರ್ ತಿಳಿಸಿದರು.
ಖಾಸಗಿ ಶಾಲೆಗಳಲ್ಲಿ ತಮ್ಮ ಮಕ್ಕಳನ್ನು ದಾಖಲಿಸಿರುವ ಹಲವಾರು ಪೋಷಕರು ಕೊರೊನಾ ಸಂದರ್ಭದಲ್ಲಿನ ತೀವ್ರ ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಈ ಬಾರಿ ಶುಲ್ಕ ಪಾವತಿಯಿಂದ ಹೆಚ್ಚಿನ ವಿನಾಯಿತಿಯನ್ನು ನೀಡಲು ಹಲವು ಸಂದರ್ಭಗಳಲ್ಲಿ ಪ್ರತಿಭಟನೆಯ ಮೂಲಕ ಸರಕಾರದ ಗಮನಕ್ಕೆ ತಂದಿದ್ದಾರೆ. ಹಲವಾರು ಪೋಷಕರು ಕೊರೊನಾ ನೆಪವೊಡ್ಡಿ ಶಾಲೆಗಳಿಗೆ ಶುಲ್ಕ ಪಾವತಿಸುವುದನ್ನು ನಿಲ್ಲಿಸಿರುವ ಕಾರಣ, ಖಾಸಗಿ ಶಾಲೆಗಳು ಸಹ ಸಂಕಷ್ಟವನ್ನು ಎದುರಿಸುತ್ತಿವೆ. ಶಿಕ್ಷಣ ಕಾಯಿದೆಯನುಸಾರ, ಶುಲ್ಕ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಶಾಲಾ ಬೋಧನಾ ಶುಲ್ಕ ಹೆಚ್ಚಿಸಬಾರದೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಸರ್ಕಾರ ದಿನಾಂಕ 19-06-2020ರಂದು ಆದೇಶ ಹೊರಡಿಸಿತ್ತು ಎಂದು ಶಾಲೆಗಳು ಮತ್ತು ಪೋಷಕರ ಹಿತದೃಷ್ಟಿಯಿಂದ ಕೈಗೊಂಡ ಕ್ರಮಗಳನ್ನು ಮೆಲುಕು ಹಾಕಿದರು.