ಮಹಾಮಾರಿ ಕೊರೊನಾ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ತುರ್ತು ಬಳಕೆಗೆಂದು ಕೋವಿ ಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆಗಳಿಗೆ ಅನುಮೋದನೆ ನೀಡಿದೆ. ಅಲ್ಲದೆ ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆಗಳನ್ನು ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಲಸಿಕೆ ಲಭ್ಯವಿದ್ದರೂ ಸಹ ಇದನ್ನು ಪಡೆಯಲು ಆರೋಗ್ಯ ಕಾರ್ಯಕರ್ತರು ಹಿಂದೇಟು ಹಾಕುತ್ತಿದ್ದಾರೆ ಎಂಬ ಅಂಶ ಈಗ ಬಹಿರಂಗವಾಗಿದೆ.
ಲಸಿಕೆ ಪಡೆಯಲು ನೋಂದಾಯಿಸಿದವರ ಪೈಕಿ ಈವರೆಗೆ ಶೇಕಡ 56 ರಷ್ಟು ಮಂದಿ ಮಾತ್ರ ಲಸಿಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದ್ದು, ಲಸಿಕೆಗಳ ಸುರಕ್ಷತೆ ಕುರಿತು ಇರುವ ಅನುಮಾನವೇ ಇದನ್ನು ಪಡೆಯಲು ಹಿಂದೇಟು ಹಾಕುತ್ತಿರುವುದಕ್ಕೆ ಕಾರಣವೆನ್ನಲಾಗಿದೆ. ಕೇಂದ್ರ ಸರ್ಕಾರ ಲಸಿಕೆ ಪಡೆಯುವುದು ಕಡ್ಡಾಯವೇನಲ್ಲ ಎಂದು ಈಗಾಗಲೇ ಹೇಳಿರುವುದರಿಂದ ಈ ಮೊದಲು ನೋಂದಾಯಿಸಿದ ಬಹುತೇಕರು ಲಸಿಕೆ ಪಡೆಯಲು ಈಗ ಮುಂದೆ ಬರುತ್ತಿಲ್ಲವೆನ್ನಲಾಗಿದೆ.
‘ಕೊರೊನಾ’ ಇದೆ ಎಂಬ ಸಂಗತಿಯೇ ಗೊತ್ತಿರಲಿಲ್ಲವಂತೆ ಇವರಿಗೆ…!
ಇತರೆ ದೇಶಗಳಲ್ಲಿ ಲಸಿಕೆ ಕೊರತೆ ಇದ್ದು, ಆದರೆ ಭಾರತದಲ್ಲಿ ಇದು ಲಭ್ಯವಿದ್ದರೂ ಸಹ ನಿರೀಕ್ಷಿತ ಪ್ರಮಾಣದಲ್ಲಿ ಲಸಿಕೆ ನೀಡುವ ಕಾರ್ಯ ಪ್ರಗತಿಯಾಗದಿರುವುದು ಅಧಿಕಾರಿಗಳಿಗೆ ತಲೆಬಿಸಿಯನ್ನುಂಟು ಮಾಡಿದೆ ಎನ್ನಲಾಗಿದೆ. ಹೀಗಾಗಿ ಸರ್ಕಾರ ಲಸಿಕೆಯ ಸುರಕ್ಷತೆ ಕುರಿತು ಮತ್ತೊಮ್ಮೆ ಮನದಟ್ಟು ಮಾಡಿಸುವ ಮೂಲಕ ಭರವಸೆ ತುಂಬಬೇಕೆಂಬುದು ಹಲವು ಆರೋಗ್ಯ ಕಾರ್ಯಕರ್ತರ ಅಭಿಪ್ರಾಯವಾಗಿದೆ.