ನವದೆಹಲಿ: ಕೇಂದ್ರ ಹಣಕಾಸು ಸಚಿವಾಲಯದ ವೆಚ್ಚ ಇಲಾಖೆಯು ಕರ್ನಾಟಕ ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ (ಆರ್ ಎಲ್ ಬಿ) ಎರಡನೇ ಕಂತಿನ 2412.75 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದೆ.
ಆರ್ ಎಲ್ ಬಿ ಅನುದಾನವಾಗಿ ಕರ್ನಾಟಕ, ಆಂಧ್ರಪ್ರದೇಶ, ಕೇರಳ, ಮಹಾರಾಷ್ಟ್ರ, ಅಸ್ಸಾಂ, ಮಣಿಪುರ, ಗುಜರಾತ್, ಗೋವಾ ಸೇರಿದಂತೆ 18 ರಾಜ್ಯಗಳಿಗೆ ಒಟ್ಟು 12,351.5 ಕೋಟಿ ರೂ ಬಿಡುಗಡೆ ಮಾಡಿದ್ದು, ಈ ಮೊತ್ತ 2020-21ರ ಆರ್ಥಿಕ ವರ್ಷದಲ್ಲಿ ಬಿಡುಗಡೆಯಾದ ಮೂಲ ಅನುದಾನದ 2ನೇ ಕಂತಾಗಿದೆ. ಪ್ರಸಕ್ತ ವರ್ಷ ಕೇಂದ್ರ ಸರ್ಕಾರ ಒಟ್ಟು 45,738 ಕೋಟಿ ಅನುದಾನ ಬಿಡುಗಡೆ ಮಾಡಿದೆ.
ಹಳ್ಳಿ, ತಾಲೂಕುಗಳಾದ್ಯಂತ ಸಂಪನ್ಮೂಲಗಳನ್ನು ಸಂಗ್ರಹಿಸಲು ಅನುವು ಮಾಡಿಕೊಡಲು ಪಂಚಾಯತ್ ರಾಜ್ ವ್ಯವಸ್ಥೆಯ ಎಲ್ಲಾ ಮೂರು ಹಂತಗಳಿಗೆ ಅಂದರೆ ಗ್ರಾಮ, ತಾಲೂಕು ಹಾಗೂ ಜಿಲ್ಲೆಗಳಿಗೆ ಈ ಅನುದಾನ ನಿಡಲಾಗುತ್ತದೆ. ಕೇಂದ್ರದ ಯೋಜನೆಗಳಾದ ಸ್ವಚ್ಚ ಭಾರತ ಮತ್ತು ಜಲ ಜೀವನ್ ಮಿಷನ್ ಅಡಿಯಲ್ಲಿ ಕೇಂದ್ರ ಮತ್ತು ರಾಜ್ಯವು ನೈರ್ಮಲ್ಯ ಮತ್ತು ಕುಡಿಯುವ ನೀರಿಗಾಗಿ ಮೀಸಲಿಟ್ಟಿರುವ ಹಣಕ್ಕೆ ಹೆಚ್ಚುವರಿಯಾಗಿ ಈ ಅನುದಾನ ನೀಡಲಾಗುತ್ತದೆ.