ಮುಂಬೈ: ಗಡಿ ವಿಚಾರವಾಗಿ ಮತ್ತೆ ಉದ್ಧಟತನ ಮೆರೆದಿರುವ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ, ಮರಾಠಿ ಅಸ್ಮಿತೆ, ಮರಾಠಿಗರ ತಾಕತ್ತು ತೋರಿಸುವ ಕಾಲ ಬಂದಿದೆ. ಬೆಳಗಾವಿ, ಮರಾಠಿ ಭಾಷಿಕರ ಪ್ರದೇಶವನ್ನು ಮಹಾರಾಷ್ಟ್ರಕ್ಕೆ ಸೇರಿಸಿಯೇ ವಿಶ್ರಮಿಸುತ್ತೇನೆ ಎಂದು ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ.
ಮುಂಬೈನಲ್ಲಿ ಮಹಾರಾಷ್ಟ್ರ ಕರ್ನಾಟಕ ಸೀಮಾ ವಿವಾದ ಸಂಗರ್ಷ ಅನಿ ಸಂಕಲ್ಪ ಎಂಬ ವಿವಾದಾತ್ಮಕ ಪುಸ್ತಕ ಬಿಡುಗಡೆ ಮಾಡಿದ ಉದ್ಧವ್ ಠಾಕ್ರೆ, ಕನ್ನಡಿಗರ ವಿರುದ್ಧ ಮರಾಠಿಗರನ್ನು ಎತ್ತಿಕಟ್ಟುವ ಕೆಲಸ ಮಾಡಿದ್ದಾರೆ. ಭಾಷಾವಾರು ಪ್ರಾಂತ್ಯದ ರಚನೆ ವೇಳೆ ನಮಗೆ ಅನ್ಯಾಯವಾಗಿದೆ. ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸದೇ ಬಿಡುವುದಿಲ್ಲ. ಕರ್ನಾಟಕ ಸರ್ಕಾರ ಯಾವುದೇ ಕಾನೂನು ಪಾಲನೆ ಮಾಡುತ್ತಿಲ್ಲ. ಮರಾಠಿಗರ ಮೇಲೆ ನಿರಂತರವಾಗಿ ದೌರ್ಜನ್ಯವೆಸಗಲಾಗುತ್ತಿದೆ. ಇದನ್ನು ನಾವು ಸಹಿಸುವುದಿಲ್ಲ ಎಂದು ಗುಡುಗಿದ್ದಾರೆ.
ಬೆಳಗಾಂವ್ ನ್ನು ಬೆಳಗಾವಿ ಎಂದು ನಾಮಕರಣ ಮಾಡಿದ್ದಾರೆ. ಬೆಳಗಾವಿಯಲ್ಲಿ ಸುವರ್ಣಸೌಧ ಕಟ್ಟಿ ಅಧಿವೇಶನವನ್ನೂ ಮಾಡುತ್ತಾರೆ. ಅಲ್ಲದೇ 2ನೇ ರಾಜಧಾನಿ ಎಂದು ಘೋಷಿಸಿದ್ದು ನ್ಯಾಯಾಂಗ ನಿಂದನೆ. ಕರ್ನಾಟಕ ಸರ್ಕಾರ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.