ಜೋ ಬಿಡೆನ್ ಅಮೆರಿಕ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿ ಈಗಿನ್ನೂ ಒಂದು ವಾರವಷ್ಟೇ ಕಳೆದಿದೆ. ಆದರೆ ಇಷ್ಟು ಕಡಿಮೆ ಸಮಯದಲ್ಲೇ ಬಿಡೆನ್ ಸರ್ಕಾರ ತೆಗೆದುಕೊಂಡ ಮಹತ್ವಪೂರ್ಣ ನಿರ್ಧಾರದಿಂದಾಗಿ ಅಮೆರಿಕದಲ್ಲಿ ಕೆಲಸ ಮಾಡುತ್ತಿರುವ ಹೆಚ್ 1 ಬಿ ವೀಸಾದಾರ ಭಾರತೀಯರಿಗೆ ಶುಭ ಸುದ್ದಿ ಸಿಕ್ಕಂತಾಗಿದೆ. ಬಿಡೆನ್ ಸರ್ಕಾರ ಹೆಚ್ 1 ಬಿ ವೀಸಾ ಕೆಲಸಗಾರರ ಹೆಚ್ 4 ವೀಸಾದಾರ ಸಂಗಾತಿಯರು ಕೆಲಸ ಮಾಡುವ ಅವಕಾಶ ನೀಡಿದೆ.
ಡೊನಾಲ್ಡ್ ಟ್ರಂಪ್ ಅಧಿಕಾರಾವಧಿಯಲ್ಲಿ ಹೆಚ್ 1 ಬಿ ವೀಸಾದಾರರ ಸಂಗಾತಿಗಳಿಗೆ ಕೆಲಸ ಮಾಡಲು ಅವಕಾಶ ಇರಲಿಲ್ಲ. ಕಳೆದ ನಾಲ್ಕು ವರ್ಷಗಳಿಂದ ಈ ನಿರ್ಬಂಧ ಎದುರಿಸುತ್ತಿದ್ದ ಹೆಚ್ 4 ವೀಸಾದಾರರಿಗೆ ಇದೀಗ ರಿಲೀಫ್ ಸಿಕ್ಕಂತಾಗಿದೆ.
ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾದ ಬಳಿಕ ಒಬಾಮಾ ಈ ಹಿಂದೆ ಹೆಚ್ 1 ಬಿ ವೀಸಾದಾರರ ಸಂಗಾತಿಗಳಿಗೂ ಉದ್ಯೋಗ ಮಾಡಲು ನೀಡಿದ್ದ ಅವಕಾಶವನ್ನ ರದ್ದು ಮಾಡುವ ಪ್ರಯತ್ನ ಮಾಡಿದ್ದರು.
ಆದರೆ ಇದೀಗ ಬಿಡೆನ್ ಸರ್ಕಾರ ಟ್ರಂಪ್ ಅಧಿಕಾರಾವಧಿಯ ಈ ನಿರ್ಬಂಧವನ್ನ ಹಿಂಪಡೆದಿದೆ. ಹೆಚ್ 4 ವೀಸಾದಾರರೂ ಕೂಡ ಇನ್ಮುಂದೆ ಅಮೆರಿಕದಲ್ಲಿ ಉದ್ಯೋಗ ಮಾಡಬಹುದಾಗಿದೆ. ಬಿಡೆನ್ ಸರ್ಕಾರದ ಈ ನಿರ್ಧಾರದಿಂದ ಅಮೆರಿಕದ ಬಹುತೇಕ ವಲಸಿಗರಿಗೆ ರಿಲೀಫ್ ಸಿಕ್ಕಂತಾಗಿದೆ.
ಈ ವಿಚಾರವಾಗಿ ಖುಷಿ ಹಂಚಿಕೊಂಡ ವಲಸಿಗರೊಬ್ಬರು. ಬಹಳ ವರ್ಷಗಳ ಗೊಂದಲದ ಬಳಿಕ ಇದೀಗ ನಮಗೆ ನಿಟ್ಟುಸಿರು ಬಿಡುವ ಹಾಗೆ ಆಗಿದೆ ಎಂದು ಹೇಳಿದ್ದಾರೆ.